ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

ಕಾಸರಗೋಡು: ಕಳೆದ ಮೇ ೧೫ರಂದು ಮುಂಜಾನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಮನೆಯೊಳಗೆ ನಿದ್ರಿಸುತ್ತಿದ್ದ 9ರ ಹರೆಯದ ಬಾಲಕಿಯನ್ನು ಅಪಹರಿಸಿ ಅಲ್ಪ ದೂರದ ಬಯಲಿಗೆ ಒಯ್ದು ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯ ಕಿವಿ ಆಭರಣವನ್ನು ಕಳವುಗೈದ ಪ್ರಕರಣದ ದೋಷಾರೋಪ ಪಟ್ಟಿಯನ್ನು ಹೊಸದುರ್ಗ ಪೊಲೀಸರು ಕಾಸರಗೋಡು ಪೋಕ್ಸೋ ಕ್ಷಿಪ್ರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಕೊಡಗು ನಾಪೊಕ್ಲು ನಿವಾಸಿ ಪಿ.ಎ. ಸಲಿಂ (28) ಈ ಪ್ರಕರಣದ ಆರೋಪಿಯಾಗಿದ್ದಾನೆ. ಬಾಲಕಿಯ ಕದ್ದ ಕಿವಿ ಆಭರಣವನ್ನು ಮಾರಾಟ ಮಾಡಲು ಆತನಿಗೆ ಸಹಾಯ ಒದಗಿಸಿದ ಆತನ ಸಹೋದರಿ ಈಗ ಕೂತು ಪರಂಬ್‌ದಲ್ಲಿ ವಾಸಿಸುತ್ತಿರುವ ಮೂಲತಃ ಕೊಡಗು ನಿವಾಸಿ ಹೈಬಾ (20)ಳ ವಿರುದ್ಧವೂ ಪೊಲೀಸರು ದೋಷಾ ರೋಪ ಪಟ್ಟಿಯಲ್ಲಿ ಆರೋಪಿಯನ್ನಾಗಿ ಸೇರ್ಪಡೆಗೊಳಿಸಿದ್ದಾರೆ.

ಘಟನೆ ನಡೆದ ಕೇವಲ ಒಂದು ತಿಂಗಳೊಳಗೆ ಪೊಲೀಸರು ಈ ಪ್ರಕರಣದ ದೋಷಾರೋಪ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಒಟ್ಟು 300 ಪುಟಗಳು ಹೊಂದಿರುವ ಜಾರ್ಜ್‌ಶೀಟ್‌ನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ 67 ಸಾಕ್ಷಿಗಳು ಒಳಗೊಂಡಿದ್ದಾರೆ. ಮಾತ್ರವಲ್ಲ 40ರಷ್ಟು ವೈಜ್ಞಾನಿಕ ಪುರಾವೆಗಳು, ಘಟನೆ ನಡೆದ ವೇಳೆ ಆರೋಪಿ ಧರಿಸಿದ್ದ ಬಟ್ಟೆ,  ಘಟನೆ ನಡೆದ ಸ್ಥಳದಲ್ಲಿ ಲಭಿಸಿದ್ದ ತಲೆಗೂದಲುಗಳನ್ನು ಸಾಕ್ಷಿ ರೂಪದಲ್ಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ನ್ಯಾಯಾಲಕ್ಕೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಇತರ 15ರಷ್ಟು ಹೆಚ್ಚುವರಿ ದಾಖಲು ಪತ್ರಗಳನ್ನೂ ಅದರಲ್ಲಿ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page