ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ದಂಪತಿ
ಕಾಸರಗೋಡು: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಬಳಿಕ ಅದನ್ನು ವಾರಿಸುದಾರರಿಗೆ ಹಸ್ತಾಂತರಿಸಿದ ದಂಪತಿ ತೋರಿದ ಪ್ರಾಮಾಣಿಕತೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದ ರಾಘವೇಂದ್ರ ಮತ್ತು ಅವರ ಪತ್ನಿ ಲೀಲಾವತಿ ಈ ರೀತಿ ಪ್ರಾಮಾಣಿಕತೆ ಮೆರೆದ ದಂಪತಿ. ಇವರು ಸೆಪ್ಟಂಬರ್ ೩೦ರಂದು ನಗರದ ಐಸಿ ಭಂಡಾರಿ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರಿಗೆ ರಸ್ತೆಯಲ್ಲಿ ಚಿನ್ನದ ಸರವೊಂದು ಬಿದ್ದು ಸಿಕ್ಕಿದೆ. ಅದನ್ನು ಅವರು ತಕ್ಷಣ ಕಾಸರಗೋಡು ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ. ಆ ಬಳಿಕ ಆ ಬಗ್ಗೆ ವಾಟ್ಸಪ್ ಗ್ರೂಪ್ಗಳ ಮೂಲಕ ವ್ಯಾಪಕವಾಗಿ ಸಂದೇಶ ರವಾನಿಸಲಾಯಿತು. ಅದನ್ನು ಕಂಡ ಆ ಚಿನ್ನದ ಮಾಲಕ ಪೊಲೀಸ್ ಠಾಣೆಗೆ ನಿನ್ನೆ ನೇರವಾಗಿ ತಲುಪಿದ್ದಾರೆ. ಆದರೆ ಈ ಮಧ್ಯೆ ರಾಘವೇಂದ್ರ ಗಲ್ಫ್ಗೆ ಹೋಗಿದ್ದರು. ಅದರಿಂದಾಗಿ ಅವರ ಪತ್ನಿ ಲೀಲಾವತಿಯವರನ್ನು ಪೊಲೀಸರು ಠಾಣೆಗೆ ಕರೆಸಿ ಪೊಲೀಸರ ಸಮ್ಮುಖದಲ್ಲೇ ಅವರ ಕೈಯಿಂದಲೇ ಆ ಚಿನ್ನದ ಸರವನ್ನು ಅದರ ಮಾಲಕನಿಗೆ ಹಸ್ತಾಂತರಿಸಲಾಯಿತು.