ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸ್ ಮರಳಿಸಿ ಮಾದರಿಯಾದ ವಿದ್ಯಾರ್ಥಿ
ಕುಂಬಳೆ: ಬಸ್ನಲ್ಲಿ ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸ್ ಮರಳಿ ನೀಡಿ ವಿದ್ಯಾರ್ಥಿ ಮಾದರಿಯಾಗಿದ್ದಾನೆ. ಬಂದ್ಯೋಡು ಮುಟ್ಟಂ ನಿವಾಸಿ ಅಬ್ದುಲ್ ಖಾದರ್ ನ್ಯೂಮಾನ್ಗೆ ಬಸ್ನಲ್ಲಿ ಪರ್ಸ್ ಬಿದ್ದು ಸಿಕ್ಕಿತ್ತು. ಅದನ್ನು ಆತ ಪೊಲೀಸ್ ಠಾಣೆಗೆ ತಲುಪಿಸಿದ್ದು ಬಳಿಕ ಅದರ ವಾರಿಸುದಾರರನ್ನು ಪತ್ತೆಹಚ್ಚಿ ಹಸ್ತಾಂತರಿಸಲಾಯಿತು. ಶನಿವಾರ ಬೆಳಿಗ್ಗೆ ೧೦ ಗಂಟೆ ವೇಳೆ ಶುಕ್ರಿಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಖಾದರ್ಗೆ ಪರ್ಸ್ ಬಿದ್ದು ಸಿಕ್ಕಿದೆ. ಅದನ್ನು ಆತ ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿದ್ದನು.
ಪರ್ಸ್ನಲ್ಲಿ ೪೭೫೦ ರೂ, ಎಟಿಎಂ ಕಾರ್ಡ್ ಸಹಿತ ಹಲವು ದಾಖಲೆ ಪತ್ರಗಳಿದ್ದವು. ಎಎಸ್ಐಗಳಾದ ಪ್ರಕಾಶ್, ಪ್ರದೀಪ್ ನಡೆಸಿದ ತನಿಖೆಯಲ್ಲಿ ಪರ್ಸ್ನ ವಾರೀಸುದಾರ ಚೇವಾರ್ ನಿವಾಸಿ ಅಬ್ದುಲ್ ರಜಾಕ್ರೆಂದು ತಿಳಿದು ಬಂದು ಅವರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿದರು. ಬಳಿಕ ಪೊಲೀಸರ ಉಪಸ್ಥಿತಿಯಲ್ಲಿ ಪರ್ಸನ್ನು ಅಬ್ದುಲ್ ಖಾದರ್ ಮೂಲಕ ಅಬ್ದುಲ್ ರಜಾಕ್ರಿಗೆ ಹಸ್ತಾಂತರಿಸಲಾಯಿತು. ಅಬ್ದುಲ್ ಖಾದರ್ನ ಪ್ರಾಮಾಣಿಕತೆಗೆ ಪೊಲೀಸರು ಅಭಿನಂದಿಸಿದ್ದಾರೆ.