ಬಿದ್ದು ಸಿಕ್ಕಿದ ೧೧,೦೦೦ ರೂ. ಮರಳಿಸಿ ವ್ಯಕ್ತಿಯ ಪ್ರಾಮಾಣಿಕತೆ: ಸರ್ವರ ಪ್ರಶಂಸೆ

ಕುಂಬಳೆ: ಬಿದ್ದು ಸಿಕ್ಕಿದ ೧೧ಸಾವಿರ ರೂಪಾಯಿಗಳನ್ನು ಅವರಿಗೆ ಮರಳಿ ನೀಡಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಕುಂಬಳೆ ಕೃಷ್ಣನಗರ ನಿವಾಸಿಯೂ ಕರ್ನಾಟಕದಲ್ಲಿ ಫೈನಾನ್ಸ್ ಶಿವರಾಮ ಎಂಬವರು ಹಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಯಾಗಿದ್ದಾರೆ. ಕುಂಬಳೆ ಭಾಸ್ಕರ ನಗರ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಮೊಹಮ್ಮದ್ ಅಸೀಸ್ ನಿನ್ನೆ ಮಧ್ಯಾಹ್ನ ಕುಂಬಳೆಯ ಡಾಕ್ಟರ್ಸ್ ಆಸ್ಪತ್ರೆಗೆ ಬಂದು ಹಿಂತಿರುಗಿದ್ದರು. ಈ ವೇಳೆ ಅವರು ಕಾರಿಗೆ ಹತ್ತುತ್ತಿದ್ದಾಗ ಪ್ಯಾಂಟ್‌ನ ಜೇಬಿನಿಂದ ೧೧ ಸಾವಿರ ರೂಪಾಯಿ ಕೆಳಕ್ಕೆ ಬಿದ್ದಿತ್ತು. ಅಲ್ಪ ಹೊತ್ತಿನ ಬಳಿಕ ಆಸ್ಪತ್ರೆ ಸಮೀಪದಲ್ಲಿ ನಡೆದು ಹೋಗುತ್ತಿದ್ದ  ಶಿವರಾಮರಿಗೆ ಹಣ ಬಿದ್ದು ಸಿಕ್ಕಿದೆ. ಆದರೆ ಆ ಹಣ ಯಾರದ್ದೆಂದು ತಿಳಿಯದೇ ಅವರು ಗೊಂದಲಕ್ಕೀಡಾಗಿದ್ದು, ಸಮೀಪ  ನಿವಾಸಿಗಳಲ್ಲಿ ವಿಚಾರಿಸಿದರೂ ತಿಳಿದು ಬಂದಿಲ್ಲ. ಕೊನೆಗೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಾರಿಗೆ ಹತ್ತುತ್ತಿದ್ದ ವ್ಯಕ್ತಿಯ ಹಣ ಬಿದ್ದು ಹೋಗಿರುವುದು ತಿಳಿದು ಬಂದಿದೆ. ಇದರಿಂದ ಕಾರಿನ ನಂಬ್ರ ಆದರಿಸಿ ಮಾಲಕನನ್ನು ಪತ್ತೆಹಚ್ಚಿ ಅವರಲ್ಲಿ ವಿಚಾರಿಸಿದಾಗ ಹಣ ಬಿದ್ದು ಹೋಗಿರುವುದು ಖಚಿತಗೊಂಡಿದೆ. ಇದರಂತೆ ಮೊಹಮ್ಮದ್ ಅಸೀಸ್‌ರನ್ನು ಕುಂಬಳೆಗೆ ಕರೆಸಿ ಶಿವರಾಮ ಹಣವನ್ನು ಹಸ್ತಾಂತರಿಸಿದ್ದಾರೆ. ಶಿವರಾಮರ ಪ್ರಾಮಾಣಿಕತೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

You cannot copy content of this page