ಬೆಂಗಳೂರು ಕೆಫೆ ಬಾಂಬ್ ಸ್ಫೋಟ: ಶಂಕಿತ ರೂವಾರಿ ಆಂಧ್ರ ಪ್ರದೇಶದಿಂದ ವಶಕ್ಕೆ

ಬೆಂಗಳೂರು: ಬೆಂಗಳೂರು ರಾಜಾಜಿನಗರದ ವೈಟ್ ಫೀಲ್ಡ್‌ನ ಕುಂದಲಪಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ರಂದು ಸಂಭವಿಸಿದ ಬಾಂಬ್ ಸ್ಫೋಟದ ಪ್ರಧಾನ ಸೂತ್ರಧಾರನೆಂದು ಶಂಕಿಸಲಾಗುತ್ತಿರುವ ವ್ಯಕ್ತಿಯನ್ನು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಂಧ್ರ ಪ್ರದೇಶದಿಂದ ವಶಕ್ಕೆ ತೆಗೆದುಕೊಂಡಿದೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಮೈದೂರು ಮಂಡಲಂನ ಚೆರ್ಲೋದಲ್ಲಿ ಅಡಗಿಕೊಂಡಿದ್ದ ಸಲೀಂ ಎಂಬಾತ ಎನ್.ಐ.ಎ. ವಶಕ್ಕೊಳಗಾದ ವ್ಯಕ್ತಿ. ಈತ ಉತ್ತರ ತೆಲಂಗಾಣದಲ್ಲಿ ನಿಷೇಧಿತ ಸಂಘಟನೆಯಾದ ಪಿಎಫ್‌ಐನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದನೆಂದೂ ಉತ್ತರ ತೆಲಂಗಾಣದ ಉಸ್ತುವಾರಿಯನ್ನೂ ಈತ ಹೊಂದಿದ್ದನೆಂದು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಚೆರ್ಲೋಪಲ್ಲಿಯ ಮಸೀದಿಯೊಂದರಲ್ಲಿ ಕಳೆದ ೨೫ ದಿನಗಳಿಂದ ಈತ ಅಡಗಿದ್ದ. ಇಂಟರ್‌ನೆಟ್ ಬಳಸಿಕೊಂಡು ಗೌಪ್ಯವಾಗಿ ತನಗೆ ಬೇಕಾದವರೊಂದಿಗೆ ಈತ ಮಾತುಕತೆ ನಡೆಸುತ್ತಿದ್ದನೆಂಬ ಮಾಹಿತಿಯೂ ಎನ್‌ಐಎಗೆ ಲಭಿಸಿದೆ.

ಈತನ ಅನುಮಾನಾಸ್ಪದ ನಡೆಗಳ ಆಧಾರದಲ್ಲಿ ಎನ್‌ಐಎ ಈತನ ಮೇಲೆ ತೀವ್ರ ನಿಗಾ ಇರಿಸಿತ್ತು. ಆ ಆಧಾರದಲ್ಲಿ ಆಂಧ್ರಾ ಪೊಲೀಸರ ನೆರವಿನೊಂದಿಗೆ ಮಸೀದಿ ಮೇಲೆ ದಾಳಿ ನಡೆಸಿ ಎನ್‌ಐಎ ಆತನನ್ನು ವಶಕ್ಕೆ ತೆಗೆದುಕೊಂಡು ಬಳಿಕ ಹೈದರಾಬಾದ್‌ಗೆ ಸಾಗಿಸಲಾಗಿದೆ.

ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಗಹ ಸಚಿವಾಲಯ ಈಗಾಗಲೇ  ಎನ್‌ಐಎಗೆ ಹಸ್ತಾಂತರಿಸಿದೆ. ಕೆಫೆ ಬಾಂಬ್ ಸ್ಫೋಟದಲ್ಲಿ ೯ ಮಂದಿ ಗಾಯಗೊಂಡಿದ್ದರು. ಸುಧಾರಿತ ಸ್ಫೋಟಕ ಸಾಧನೆಗಳಿಗೆ (ಐಇಡಿ) ಟೈಮರ್ ಜೋಡಣೆ ಮಾಡಿ ಸ್ಫೋಟ ನಡೆಸಲು ಬಳಸಿದ್ದ ರಾಸಾಯನಿಕ ವಸ್ತುಗಳು ಆ ಹೋಟೆಲ್‌ನಲ್ಲಿ ತನಿಖಾ ತಂಡ ಪತ್ತೆಹಚ್ಚಿದೆ. ಪೊಟ್ಯಾಶಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ರಾಸಾಯನಿಕಗಳನ್ನು ಬಳಸಿ ಈ ಸ್ಫೋಟ ನಡೆಸಲಾಗಿತ್ತೆಂಬುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟಗೊಂಡಿದೆ.

ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡ ಈಗಾಗಲೇ ಹಲವರನ್ನು ವಶಕ್ಕೆ ತೆಗೆದು ತೀವ್ರ ವಿಚಾರಣೆಗೊಳಪಡಿಸುತ್ತಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡ ಈ ತನಕ ಅಧಿಕೃತವಾಗಿ ಯಾರ ಬಂಧನವನ್ನು ದೃಢೀಕರಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆರೋಪಿಗಳ ಬಂಧನ  ನಡೆಯಬಹುದೆಂದು ಹೇಳಲಾಗುತ್ತಿದೆ.

ಬೆಂಗಳೂರು ರಾಮೇಶ್ವರ ಬಾಂಬ್ ಸ್ಫೋಟದ ತನಿಖೆ ಕೈಗೆತ್ತಿಕೊಂಡ ಬೆನ್ನಲ್ಲೇ ಬೆಂಗಳೂರು ಸೇರಿ ೭ ರಾಜ್ಯಗಳಲ್ಲಿ ಎನ್‌ಐಎ ತಂಡ ಮೆಘಾ ದಾಳಿ ಆರಂಭಿಸಿದ್ದು, ಸಮಗ್ರ ಪರಿಶೀಲನೆಯಲ್ಲೂ ತೊಡಗಿದೆ.

Leave a Reply

Your email address will not be published. Required fields are marked *

You cannot copy content of this page