ಬೆಳ್ಳೂರಿನಲ್ಲಿ ‘ನೆಟ್ಟಣಿಗೆ ರೈಸ್’ ಬಿಡುಗಡೆ ನಾಳೆ
ಬೆಳ್ಳೂರು: ಪಂಚಾಯತ್ ಕೃಷಿಭವನದ ನೇತೃತ್ವದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳೆಸಲಾದ ಅಕ್ಕಿಯನ್ನು ಗ್ರಾಹಕರಿಗೆ ದೊರಕಿಸಿಕೊಡುವ ಪ್ರಯತ್ನದ ಅಂಗವಾಗಿ ನೆಟ್ಟಣಿಗೆ ರೈಸ್ ಎಂಬ ಹೆಸರಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಅಕ್ಕಿ ಬಿಡುಗಡೆ ಕಾರ್ಯಕ್ರಮ ನಡೆಯ ಲಿದೆ. ಕೃಷಿ ತಂತ್ರಜ್ಞಾನ ನಿರ್ವಹಣಾ ಏಜೆನ್ಸಿ ಸಾಮರ್ಥ್ಯ ಉತ್ತಮಪಡಿಸಲು ತರಬೇತಿ ಕಾರ್ಯಕ್ರಮ, ಕೃಷಿಕರ ಒಕ್ಕೂಟ ರಚನೆ ನಾಳೆ ನಡೆಯಲಿದೆ.
ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸುವರು. ಪದ್ಮಶ್ರೀ ಪುರಸ್ಕೃತ, ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಬ್ರಾಂಡ್ ಬಿಡುಗಡೆಗೊಳಿಸುವರು. ಗಣಪತಿ ಭಟ್ ಕುಂಜತ್ತೋಡಿ, ಜಯ ಬೆಳೇರಿ, ಮಾಲತಿ ಮಣಿ ಭಟ್ ಹಾಗೂ ಇತರ ಕೃಷಿಕರು ಜಂಟಿಯಾಗಿ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವರು. ಕಾರಡ್ಕ ಬ್ಲೋಕ್ ಸಹಾಯಕ ಕೃಷಿ ನಿರ್ದೇಶಕಿ ಶೀನಾ ಕೆ.ವಿ. ಯೋಜನೆಯ ಬಗ್ಗೆ ಮಾಹಿತಿ ನೀಡುವರು. ಕಾರಡ್ಕ ಕೃಷಿ ಭವನದ ಅಧಿಕಾರಿ ಪಿ.ವಿ. ವಿನಿತ್ ಮೌಲ್ಯಾಧಾರಿತ ಉತ್ಪನ್ನಗಳ ಮಾರುಕಟ್ಟೆ, ಕೃಷಿಕರ ಒಕ್ಕೂಟ ರಚನೆಯ ಬಗ್ಗೆ ತಿಳಿಸುವರು. ಉಪಾಧ್ಯಕ್ಷೆ ಗೀತಾ ಕೆ., ಜನಪ್ರತಿನಿಧಿಗಳು, ಕೃಷಿ ಅಧಿಕಾರಿ ಅದ್ವೈತ್ ಎಂ.ವಿ, ಕೃಷಿ ಸಹಾಯಕರು, ರೈತರು ಭಾಗವಹಿಸುವರು.