ಬೇಕಲ್ ಫೆಸ್ಟ್: ಭದ್ರತೆ ಖಚಿತಪಡಿಸದಿದ್ದರೆ ಕಾರ್ಯಾಚರಿಸಲು ಅನುಮತಿ ಇಲ್ಲ- ಜಿಲ್ಲಾಧಿಕಾರಿ
ಕಾಸರಗೋಡು: ಬೇಕಲ ಬೀಚ್ ಫೆಸ್ಟಿವಲ್ನಂಗವಾಗಿ ಕಾರ್ಯಾ ಚರಿಸುವ ಸ್ಪೀಡ್ ಬೋಟ್, ಪಾರಸೈಲಿಂಗ್, ಜೋಯಿಂಟ್ ವ್ಹೀಲ್ ಮೊದಲಾದ ಅಡ್ವೆಂಚರ್ ಸ್ಪೋರ್ಟ್ಸ್, ಅಮ್ಯೂಸ್ಮೆಂಟ್ ಪಾರ್ಕ್ಗಳಿಗೆ, ಸ್ಟಾಲ್ಗಳಿಗೆ ಭದ್ರತೆ ಖಚಿತಪಡಿಸುವ ದಾಖಲೆಗಳನ್ನು ಹಾಜರು ಪಡಿಸಲಾಗಿಲ್ಲವೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ ಬಿಆರ್ಡಿಸಿಗೆ ಪತ್ರ ರವಾನಿಸಿದ್ದಾರೆ. ಇದಕ್ಕೂ, ಇತರ ನಿರ್ಮಾಣಗಳಿಗೂ ಎನ್ಒಸಿ ಪಡೆದುಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ನೋಟೀಸ್ ನೀಡಿಯೂ ಲೈಸನ್ಸ್ ಪಡೆಯದ ಕಾರಣ ಇದು ಕಾರ್ಯಾಚರಿ ಸುವುದು ಕಾನೂನು ವಿರುದ್ಧವೆಂದು ಪಳ್ಳಿಕೆರೆ ಪಂಚಾಯತ್ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಲಿಖಿತವಾಗಿ ಸೂಚಿಸಿದ್ದರು. ೨೧ರಂದು ೧೨ ಗಂಟೆಯ ಮುಂಚಿತ ಎಲ್ಲಾ ಪರವಾನಗಿಗಳನ್ನೂ ಹಾಜರು ಪಡಿಸಲು ನಿರ್ದೇಶಿಸಲಾಗಿದ್ದರೂ ಪಳ್ಳಿಕೆರೆ ಪಂಚಾಯತ್ ಮಂಜೂರು ಮಾಡಿದ ದೃಢೀಕರಣ ಪತ್ರಗಳನ್ನು ಬಿಆರ್ಡಿಸಿ ಸಮರ್ಪಿಸಿಲ್ಲ. ಭದ್ರತೆ ಖಚಿತಪಡಿಸುವುದಕ್ಕಾಗಿ ಸರಕಾರ ನಿಗದಿಪಡಿಸಿದ ವ್ಯವಸ್ಥೆಗಳನ್ನು ಪಾಲಿಸಲಾಗಿದೆಯೋ ಎಂಬುದನ್ನು ಪರಿಶೀಲಿಸಿ ನೀಡಬೇಕಾದ ಪ್ರಮಾಣಪತ್ರಗಳ ಅಭಾವದಲ್ಲಿ ಸುರಕ್ಷೆ ಸಂಬಂಧಿಸಿ ಖಚಿತತೆ ಇಲ್ಲವೆಂದು ಜಿಲ್ಲಾಧಿಕಾರಿ ಬಿಆರ್ಡಿಸಿ ಎಂಡಿಗೆ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.