ಬೋವಿಕ್ಕಾನ ಬಳಿ ಎರಡು ಚಿರತೆಗಳು ಪತ್ತೆ
ಬೋವಿಕ್ಕಾನ: ಇಲ್ಲಿಗೆ ಸಮೀಪದ ಚಿಪ್ಲಿಕಯ ಎಂಬಲ್ಲಿ ಇಂದು ಮುಂಜಾನೆ ಎರಡು ಚಿರತೆಗಳು ಕಂಡು ಬಂದಿರುವುದಾಗಿ ತಿಳಿದು ಬಂದಿದೆ. ದಿನೇಶನ್ ಕುಟ್ಟಿಯಾನಂ ಎಂಬವರು ತಮ್ಮ ಆಟೋ ರಿಕ್ಷಾದಲ್ಲಿ ಇಬ್ಬರು ಅಯ್ಯಪ್ಪ ಸ್ವಾಮಿಗಳನ್ನು ಚಿಪ್ಲಿಕಯ ಭಜನಾಮಂದಿರಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಚಿಪ್ಲಿಕಯದ ರಸ್ತೆಯಲ್ಲಿ ಎರಡು ಚಿರತೆಗಳು ಮಲಗಿರುವುದು ಕಂಡು ಬಂದಿದೆ. ಆಟೋರಿಕ್ಷಾವನ್ನು ಕಂಡೊಡನೆ ಒಂದು ಚಿರತೆ ಕಾಡಿಗೆ ಓಡಿಹೋಗಿದೆ. ಮತ್ತೊಂದು ಅಲ್ಪಹೊತ್ತು ಅಲ್ಲಿದ್ದು, ಬಳಿಕ ಕಾಡಿನತ್ತ ತೆರಳಿದೆ ಎಂದು ಆಟೋರಿಕ್ಷಾದಲ್ಲಿದ್ದವರು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಮುಳಿಯಾರು ಪಂಚಾಯತ್‌ನ ಇರಿಯಣ್ಣಿ ಸಹಿತ ಹಲವು ಕಡೆಗಳಲ್ಲಿ ಚಿರತೆಗಳು ಕಂಡು ಬಂದಿವೆ. ಇಂದು ಚಿರತೆಗಳು ಕಂಡು ಬಂದ ಚಿಪ್ಲಿಕಯದಿಂದ ಇರಿಯಣ್ಣಿಗೆ ಅಲ್ಪವೇ ದೂರವಿದೆ. ಚಿರತೆಗಳು ಪದೇ ಪದೇ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿಯಲು ನಡೆಸಿದ ಪ್ರಯತ್ನಗಳೆಲ್ಲ ವಿಫಲಗೊಂಡಿದೆ. ಚಿರತೆಗಳು ಇದೀಗ ರಸ್ತೆಯಲ್ಲೇ ಕಂಡು ಬರತೊಡಗಿದ್ದು, ಇದು ಜನರಲ್ಲಿ ಇನ್ನಷ್ಟು ಹೆಚ್ಚಿನ ಭೀತಿ ಸೃಷ್ಟಿಸಿದೆ.