ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ಇನ್ನೂ ಮರೀಚಿಕೆ: ಶೀಘ್ರ ನಿರ್ಮಾಣಕ್ಕೆ ಜನಪರವೇದಿ ಆಗ್ರಹ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಕೆಲಸಗಳು ವಿಳಂಬಗೊಳ್ಳುತ್ತಿರುವುದನ್ನು ಪ್ರತಿಭಟಿಸಿ ಮಂಗಲ್ಪಾಡಿ ಜನಪರ ವೇದಿಕೆ ರಂಗಕ್ಕಿಳಿದಿದೆ. ಆಸ್ಪತ್ರೆಯ ಮೂಲಭೂತ ಅಭಿವೃದ್ಧಿ ಸೌಕರ್ಯಕ್ಕಾಗಿರುವ ನಿರಂತರ ಹೋರಾಟದ ಫಲವಾಗಿ ೨೦೨೦ರಲ್ಲಿ ಕಿಫ್‌ಬಿ ಫಂಡ್‌ನಿಂದ ೧೩ ಕೋಟಿ ರೂ. ಮಂಜೂರು ಮಾಡಿದರೂ ಇದುವರೆಗೆ ಕಟ್ಟಡದ ಕೆಲಸ ಆರಂಭಗೊಂಡಿಲ್ಲ. ಹಾಗೂ ಹಳೆಯ ಕಟ್ಟಡವನ್ನು ಮುರಿದು ತೆರವುಗೊಳಿಸಲಾಗಿದೆ. ಬಳಿಕ ಮಣ್ಣು ತಪಾಸಣೆ ಮಾತ್ರವೇ ನಡೆದಿದೆ.

ಇದರ ನಿರ್ಮಾಣ ಹೊಣೆಯನ್ನು ಸಿಡ್ಕೋಗೆ ವಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ ಎಂದು ಜನಪರವೇದಿಕೆ ತಿಳಿಸಿದೆ. ಇದರ ಬಳಿಕ ಹಲವು ವರ್ಷಗಳಿಂದ ಯಾವುದೇ ಪ್ರಗತಿ ಈ ಬಗ್ಗೆ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಪರವೇದಿಯ ಮುಖಂಡರು ಆಸ್ಪತ್ರೆಯ ಸುಪರಿಂಟೆಂಡೆಂಟ್‌ರನ್ನು ಸಂಪರ್ಕಿಸಿದಾಗ ಕಟ್ಟಡದ ಫಂಡ್‌ಗೆ ಬೇಕಾಗಿರುವ ಎಸ್ಟಿಮೇಟ್ ಕ್ರಮಗಳು ನಡೆಯುತ್ತಿದೆ ಎಂದು ತಿಳಿಸಿದ್ದರು. ಅದರ ಬಳಿಕ ಏನು ಸಂಭವಿಸಿದೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಈಗಲೂ ಹಳೆಯ ಕಟ್ಟಡದಲ್ಲೇ ಆಸ್ಪತ್ರೆ ಕಾರ್ಯಾಚರಿಸುತ್ತಿದೆ.  ಕೋವಿಡ್ ಕಾಲದಿಂದಲೇ ಜನರಿಗಿರುವ ಚಿಕಿತ್ಸಾ ಸಮಸ್ಯೆಗಳು, ಸಂಕಷ್ಟಗಳು ಈಗಲೂ ಮುಂದುವರಿಯುತ್ತಿದೆ.

ಮಂಗಲ್ಪಾಡಿಯ ಹೊರತಾಗಿ ಪೈವಳಿಕೆ, ಮೀಂಜ, ವರ್ಕಾಡಿ, ಮಂಜೇಶ್ವರ ಸಹಿತದ ಜನಸಾಮಾನ್ಯರು, ಹಿಂದುಳಿದ ವಿಭಾಗದವರು, ತೀರ ಪ್ರದೇಶದವರು ಆಶ್ರಯಿಸುವ ಆಸ್ಪತ್ರೆಯಾಗಿದೆ ಇದು. ಇಲ್ಲಿ ರಾತ್ರಿ ಕಾಲದಲ್ಲಿ ಚಿಕಿತ್ಸಾ ಸೌಲಭ್ಯವನ್ನು ನಿಷೇಧಿಸುವ ಅವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯ ಕಟ್ಟಡವನ್ನು ಶೀಘ್ರ ನಿರ್ಮಿಸಿ ಆಸ್ಪತ್ರೆಯಿಂದ ಜನರಿಗೆ ಉಪಕಾರಪ್ರದವಾಗುವ ರೀತಿಯ ಸೇವೆ ಲಭ್ಯಗೊಳಿಸಬೇಕೆಂದು ಜನಪರವೇದಿ ಆಗ್ರಹಿಸಿದೆ. ಈ ಬೇಡಿಕೆಯನ್ನು ಮುಂದಿಟ್ಟು ಆಂದೋಲನಕ್ಕಿಳಿಯಲು ವೇದಿಕೆ ತೀರ್ಮಾನಿಸಿದೆ.

Leave a Reply

Your email address will not be published. Required fields are marked *

You cannot copy content of this page