ಮಂಜೇಶ್ವರದಲ್ಲಿ ಎಸ್.ಐ.ಗೆ ಹಲ್ಲೆಗೈದ ಪ್ರಕರಣ: ಜಿಲ್ಲಾ ಪಂ. ಸದಸ್ಯನಾದ ಮುಸ್ಲಿಂ ಯೂತ್ ಲೀಗ್ ನೇತಾರ ಬಂಧನ
ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಗಸ್ತು ನಡೆಸುತ್ತಿದ್ದ ಎಸ್ಐ ಮೇಲೆ ಆಕ್ರಮಿಸಿ ಕೈಯ ಎಲುಬು ಮುರಿದ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಜೊತೆ ಕಾರ್ಯದರ್ಶಿಯೂ, ಮಂಜೇಶ್ವರ ಜಿಲ್ಲಾ ಪಂಚಾಯತ್ ಡಿವಿಜನ್ ಸದಸ್ಯನಾದ ಗೋಲ್ಡನ್ ಅಬ್ದುಲ್ ರಹಿಮಾನ್ರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಸೆರೆಗೀಡಾದ ಇವರನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕಾಸರಗೋಡು ನಗರ ಠಾಣೆಗೆ ತಲುಪಿಸಲಾಗಿದೆ. ಇಂದು ಬೆಳಿಗ್ಗೆ ಮಂಜೇಶ್ವರ ಪೊಲೀಸರು ಅಬ್ದುಲ್ ರಹಿಮಾನ್ರನ್ನು ಮತ್ತೆ ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿ ದರು. ಎಸ್ಐಗೆ ಹಲ್ಲೆಗೈದ ಪ್ರಕರಣದಲ್ಲಿ ರಶೀದ್, ಅಫ್ಸಲ್ ಎಂಬಿವರ ಸಹಿತ ಇತರ ನಾಲ್ಕು ಮಂದಿ ಆರೋಪಿಗಳನ್ನು ಸೆರೆಹಿಡಿಯಲು ಬಾಕಿಯಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಅವರಿಗಾಗಿ ಶೋಧ ತೀವ್ರಗೊಳಿಸಲಾಗಿದೆ.
ಮೊನ್ನೆ ಮುಂಜಾನೆ ೩ ಗಂಟೆ ವೇಳೆ ಉಪ್ಪಳ ಹಿದಾಯತ್ನಗರದಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ರಾತ್ರಿ ಕಾಲದ ಪಟ್ರೋ ಲಿಂಗ್ ನಡೆಸುತ್ತಿದ್ದ ಎಸ್ಐ ಬಿ. ಅನೂಪ್, ಸೀನಿಯರ್ ಸಿವಿಲ್ ಪೊಲೀಸ್ ಆಫೀ ಸರ್ ಕಿಶೋರ್ರ ಮೇಲೆ ತಂಡ ಹಲ್ಲೆ ಗೈದಿರುವುದಾಗಿ ಕೇಸು ದಾಖಲಿಸಲಾಗಿದೆ. ಹಿದಾಯತ್ನಗರ ದಲ್ಲಿ ಜನರು ಗುಂಪುಗೂಡಿ ನಿಂತಿರು ವುದನ್ನು ಕಂಡು ಅವರನ್ನು ಅಲ್ಲಿಂದ ಮರಳಿ ಹೋಗು ವಂತೆ ಪೊಲೀಸರು ತಿಳಿಸಿದಾಗ ತಂಡ ವಾಗ್ವಾದ ನಡೆಸಿದ್ದು, ಬಳಿಕ ಹಲ್ಲೆಗೈದಿರು ವುದಾಗಿ ದೂರಲಾಗಿದೆ. ಗಾಯ ಗೊಂಡ ಎಸ್ಐ ವಿಶ್ರಾಂ ತಿಯಲ್ಲಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಿಕೆ, ಹಲ್ಲೆಗೈದು ಗಂಭೀರ ಗಾಯಗೊಳಿಸುವಿಕೆ ಮೊದ ಲಾದ ಜಾಮೀನುರಹಿತ ಕಾಯ್ದೆಗಳನ್ನು ಹೇರಿ ೫ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ತಾನು ಸ್ಥಳದಲ್ಲಿರಲಿಲ್ಲವೆಂದೂ, ಪೊಲೀಸರಿಗೆ ಹಲ್ಲೆಗೈದಿಲ್ಲವೆಂದು ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.