ಮಂಜೇಶ್ವರ ವಿಧಾನಸಭಾ ಚುನಾವಣಾ ತಕರಾರು ಪ್ರಕರಣ: ವಿಚಾರಣೆ ನಾಳೆ ಮತ್ತೆ ಆರಂಭ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಂಚ ನೀಡಿದ ಆರೋಪದಂತೆ ದಾಖಲಿಸಲಾದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲ ಯದಲ್ಲಿ ನಾಳೆ ಮತ್ತೆ ಆರಂಭಗೊಳ್ಳಲಿದೆ. ಈ ಪ್ರಕರಣವನ್ನು ರದ್ದುಪಡಿಸ ಬೇಕೆಂದು ಪ್ರತಿವಾದಿಗಳಾದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿ ಮೇಲಿನ ವಾದ- ಪ್ರತಿವಾದಗಳನ್ನು ಪ್ರಧಾನವಾಗಿ ನ್ಯಾಯಾಲಯ ನಾಳೆ ಆಲಿಸಲಿದೆ.
ಈ ಪ್ರಕರಣದಲ್ಲಿ ಆರೋಪಿಗ ನ್ನಾಗಿ ಹೆಸರಿಸಲಾಗಿರುವ ಕೆ. ಸುರೇಂದ್ರನ್, ಚೀಫ್ ಚುನಾವಣಾ ಏಜೆಂಟ್ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ವಿ. ಬಾಲಕೃಷ್ಣ ಶೆಟ್ಟಿ, ಯುವಮೋರ್ಚಾ ನೇತಾರರಾದ ಸುನಿಲ್ ನಾಕ್, ಕೆ. ಸುರೇಶ್ ನಾಕ್, ಮಣಿಕಂಠ ರೈ ಮತ್ತು ಲೋಕೇಶ್ ನೋಂಡಾ ಎಂಬವರಿಗೆ ಕಳೆದ ವರ್ಷ ಅಕ್ಟೋಬರ್ ೨೫ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ಬಿ.ಎಸ್.ಪಿ. ಉಮೇದ್ವಾರರಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ ಎರಡೂವರೆ ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಿ, ಆ ಮೂಲಕ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ ಲೋಕಲ್ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಈ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.