ಮಂಡಲ ಪೂಜೆ ೨೭ರಂದು

ಶಬರಿಮಲೆ: ಮಂಡಲ ಕಾಲದ ತೀರ್ಥಾಟನೆ ಡಿಸೆಂಬರ್ ೨೭ರಂದು ಮಧ್ಯಾಹ್ನ ಮಂಡಲಪೂಜೆ ಯೊಂದಿಗೆ ಸಮಾಪ್ತಿ ಹೊಂದಲಿದೆ.

ತೀರ್ಥಾಟಕರಿಗೆ ದರ್ಶನ ಸೌಭಾಗ್ಯದ ಪುಣ್ಯವಾಗಿ ಡಿಸೆಂಬರ್ ೨೬ರಂದು ಶ್ರೀ ಅಯ್ಯಪ್ಪ ದೇವರ ವಿಗ್ರಹಕ್ಕೆ ಚಿನ್ನದಂಗಿ (ತಂಗಅಂಗಿ) ಯಿಂದ ಅಲಂಕರಿಸಿ ದೀಪಾರಾಧನೆ ನಡೆಯಲಿದೆ. ಅಯ್ಯಪ್ಪ ದೇವರನ್ನು ಅಲಂಕರಿಸುವ ಚಿನ್ನದ ಅಂಗಿ ಮತ್ತು ಇತರ ಆಭರಣಗಳನ್ನು ಪಂದಳಂ ಅರಮನೆಯಿಂದ ರಥಯಾತ್ರೆಯೊಂದಿಗೆ ಡಿ. ೨೬ರಂದು ಪಂಪಾಕ್ಕೆ ತರಲಾಗುವುದು. ಬಳಿಕ ಅಲ್ಲಿಂದ ಸೇವಾ ಸಂಘದ ಕಾರ್ಯಕರ್ತರು ಹೊತ್ತುಕೊಂಡು ಮೆರವಣಿಗೆ ಮೂಲಕ ಶಬರಿಮಲೆ ಕ್ಷೇತ್ರ ಸನ್ನಿಧಿಗೆ ತಲುಪಿಸುವರು. ಅಂದು ಸಂಜೆ ೬.೩೦ಕ್ಕೆ ತಂಗ ಅಂಗಿ ಒಳಗೊಂಡ ಪೆಟ್ಟಿಗೆಯನ್ನು ಹದಿನೆಂಟು ಮೆಟ್ಟಿಲು ಮೂಲಕ ಏರಿಸಿ ಅದನ್ನು ಶಬರಿಮಲೆ ಕ್ಷೇತ್ರದ ತಂತ್ರಿವರ್ಯ ಕಂಠರರ್ ಮಹೇಶ್ ಮೋಹನರ್ ಮತ್ತು ಪ್ರಧಾನ ಅರ್ಚಕ ಪಿ.ಎನ್. ಮಹೇಶ್‌ರ ಕೈಗೆ ಹಸ್ತಾಂತರಿಸಲಾಗುವುದು. ಬಳಿಕ ಆ ಚಿನ್ನದ ಒಡವೆಗಳನ್ನು ಅಯ್ಯಪ್ಪ ವಿಗ್ರಹಕ್ಕೆ ತೊಡಗಿಸಿ ದೀಪಾರಾಧನೆ ನಡೆಯಲಿದೆ. ಡಿಸೆಂಬರ್ ೨೭ರಂದು ಮಂಡಲ ಪೂಜೆಯ ಬಳಿಕ ಅಂದು ರಾತ್ರಿ ೧೦ ಗಂಟೆಗೆ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಆ ಮೂಲಕ ಮಂಡಲ ಪೂಜೆ ತೀರ್ಥಾಟನಾ ಋತು ಕೊನೆಗೊಳ್ಳಲಿದೆ. ನಂತರ ಮಕರ ಜ್ಯೋತಿ ತೀರ್ಥಾಟನಾ ಋತುಗಾಗಿ ಡಿಸೆಂಬರ್ ೩೦ರಂದು ಸಂಜೆ ೫ಕ್ಕೆ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲನ್ನು ಮತ್ತೆ ತೆರೆಯಲಾಗುವುದು.

Leave a Reply

Your email address will not be published. Required fields are marked *

You cannot copy content of this page