ಮಗಳ ಮದುವೆಗೆ ಸಿದ್ಧತೆ ಮಧ್ಯೆ ನಾಪತ್ತೆಯಾದ ತಂದೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಮಗಳ ಮದುವೆಯ ಸಿದ್ಧತೆ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದ ತಂದೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮುಳ್ಳೇರಿಯ ಬಳಿಯ ಕಾರ್ಲೆ ಎಂಬಲ್ಲಿನ ಪದ್ಮಿನಿ ಎಂಬವರ ಪುತ್ರ ರಾಜ ರಾವ್ (೫೧) ಎಂಬವರು ಮೃತಪಟ್ಟ ವ್ಯಕ್ತಿ. ಇವರ ಮಗಳ ಮದುವೆ ಇಂದು ಕರ್ಮಂತೋಡಿಯ ಆಡಿಟೋರಿಯಂನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಮದುವೆಯ ಅಂಗವಾಗಿ ಮದರಂಗಿ ಶಾಸ್ತ್ರ ನಿನ್ನೆ ಮನೆಯಲ್ಲಿ ಏರ್ಪಡಿಸಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದಂತೆ ಮೊನ್ನೆ ರಾತ್ರಿ ರಾಜ ಸ್ಕೂಟರ್ನಲ್ಲಿ ಮನೆಯಿಂದ ತೆರಳಿದ್ದರು. ಅನಂತರ ಅವರು ಮನೆಗೆ ಮರಳಿರಲಿಲ್ಲ. ಫೋನ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಇದರಿಂದ ಹುಡುಕಾಟ ನಡೆಯುತ್ತಿದ್ದಾಗ ಅವರ ಸ್ಕೂಟರ್ ದೇಲಂಪಾಡಿ ಬಳಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಂತೆ ದೇಲಂಪಾಡಿ ಸಮೀಪ ಮರದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ರಾಜ ಪತ್ತೆಯಾಗಿದ್ದಾರೆ.
ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಯಿತು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ದೀಪ್ತಿ, ದೀಕ್ಷ, ಓರ್ವ ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.