ಮಗಳ ಹುಟ್ಟುಹಬ್ಬಕ್ಕೆ ಸಿಹಿ ತಿಂಡಿ ತರಲು ತೆರಳುತ್ತಿದ್ದಾಗ ಅಪಘಾತ: ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮೆಕ್ಯಾನಿಕ್ ನಿಧನ
ಮಂಜೇಶ್ವರ: ಮಗಳ ಹುಟ್ಟು ಹಬ್ಬ ಪ್ರಯುಕ್ತ ಸಿಹಿ ತಿಂಡಿ ತರಲೆಂದು ಮಗಳೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಟಿ.ವಿ. ಮೆಕ್ಯಾನಿಕ್ ಮೃತಪಟ್ಟರು. ಮಂಜೇಶ್ವರ ಕಟ್ಟೆ ಬಜಾರ್ ನಿವಾಸಿ ರವಿಚಂದ್ರ ಹೆಗ್ಡೆ (58) ಮೃತಪಟ್ಟ ವ್ಯಕ್ತಿ. 2022 ಫೆಬ್ರವರಿ 23ರಂದು ಮೃತರು ಪುತ್ರಿ ದೀಪಿಕಾಳ ಹುಟ್ಟುಹಬ್ಬ ಪ್ರಯುಕ್ತ ಸಿಹಿತಿಂಡಿ ತರಲೆಂದು ಮಂಜೇಶ್ವರ ಒಳಪೇಟೆಗೆ ಸ್ಕೂಟರ್ನಲ್ಲಿ ಮಗಳ ಜೊತೆ ತೆರಳುತ್ತಿದ್ದಾಗ ಮಂಜೇಶ್ವರ ಬೀಚ್ ರಸ್ತೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಆಟೋ ರಿಕ್ಷಾ ಢಿಕ್ಕಿ ಹೊಡೆದು ಅಪಘಾತ ಉಂಟಾಗಿತ್ತು. ಈ ವೇಳೆ ಪುತ್ರಿ ದೀಪಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಗಂಭೀರ ಗಾಯಗೊಂಡ ರವಿಚಂದ್ರ ಹೆಗ್ಡೆಯವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಅಪಘಾತದಿಂದ ತಲೆ ಸಹಿತ ವಿವಿಧ ಭಾಗಗಳಿಗೆ ತೀವ್ರ ಹೊಡೆತ ಉಂಟಾಗಿದ್ದುದರಿಂದ ಕೋಮಾ ಸ್ಥಿತಿಯಲ್ಲಿದ್ದರು. ತಿಂಗಳುಗಳ ಬಳಿಕ ಚೇತರಿಸಿಕೊಂಡು ಬಳಿಕ ಮನೆಗೆ ಕರೆತರಲಾಗಿತ್ತು. ಆದರೆ ಕಳೆದ ಹಲವು ದಿನಗಳಿಂದ ಅಸೌಖ್ಯ ಉಲ್ಭಣಗೊಂ ಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ ಮಂಜುಳಾ ಹೆಗ್ಡೆ, ಪುತ್ರಿ ದೀಕ್ಷಾ, ಸಹೋದರ ವಿನಾಯಕ ಹೆಗ್ಡೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.