ಮತ್ತೆ ಓರ್ವೆ ಮಹಿಳೆಯ ಚಿನ್ನದ ಸರ ಕಸಿತ: ಇನ್ನೋರ್ವೆಯ ಸರ ಎಗರಿಸಲೆತ್ನ
ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ಕಳ್ಳರ ಹಾವಳಿ ಯಾವುದೇ ರೀತಿಯ ತಡೆಯಿಲ್ಲದೆ ನಿರ್ಭಯವಾಗಿ ಇನ್ನೂ ಮುಂದುವರಿಯುತ್ತಿದ್ದು, ಇದರಿಂದ ಮಹಿಳೆಯರು ರಸ್ತೆಗಿಳಿಯಲು ಭಯಪಡುವ ಸ್ಥಿತಿ ಉಂಟಾಗಿದೆ.
ಪನಯಾಲ್ ಪಾಕಂ ಆಲಿಂಡಡಿ ಕಳಂಜೋತ್ತ್ ವಳಪಿನ ನಂದನನ್ರ ಪತ್ನಿ ಪಿ. ಸಾವಿತ್ರಿ (೫೭) ಎಂಬವರು ನಿನ್ನೆ ಮಧ್ಯಾಹ್ನ ಕೆಲಸದ ಸ್ಥಳದಿಂದ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಆಲಿಂಡಡಿಯಲ್ಲಿ ಸ್ಕೂಟರ್ನಲ್ಲಿ ಹಿಂದಿನ ಭಾಗದಿಂದ ಬಂದ ಕಳ್ಳ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಯಲ್ಲಿದ್ದ ಮೂರು ಪವನ್ನ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದೇ ರೀತಿ ಉಲೂಚಿ ಅರಮಂಗಾನ ಹೌಸ್ನ ಸನೂಪ್ ಎಂಬವರ ಪತ್ನಿ ವಿ. ಲೇಖಾ (೨೧) ಎಂಬವರು ನಿನ್ನೆ ಸಂಜೆ ದೇಳಿ ಪೇಟೆ ಬಳಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳ ಮೇಲ್ಪರಂಬ ಭಾಗದಿಂದ ಕಪ್ಪು ಟಿ ಶರ್ಟ್ ಧರಿಸಿ, ಬಿಳಿ ಬಣ್ಣದ ಸ್ಕೂಟರ್ನಲ್ಲಿ ಹೆಲ್ಮೆಟ್ ಧರಿಸಿ ಬಂದ ಕಳ್ಳ ಅವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲೆತ್ನಿಸಿದ್ದು ಆಗ ಲೇಖಾ ಅದನ್ನು ತಡೆಯಲೆತ್ನಿಸಿದಾಗ ಅಲ್ಲಿ ಪರಸ್ಪರ ಹೊಕೈ ನಡೆದಾಗ ಕಳ್ಳ ಅಲ್ಲಿಂದ ತನ್ನ ಯತ್ನವನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.