ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಳ : ಎರಡು ದಿನಗಳಲ್ಲಾಗಿ ಮೂರು ನಾಗರಹಾವು ಪತ್ತೆ

ಕಾಸರಗೋಡು: ಮಳೆಗಾಲ ಆರಂಭಗೊಂಡಿರುವಂತೆಯೇ ಜಿಲ್ಲೆಯಲ್ಲಿ ವಿಷ ಹಾವುಗಳ ಹಾವಳಿಯೂ ತೀವ್ರಗೊಳ್ಳತೊಡಗಿದೆ. ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಾಗಿ ಮೂರು ನಾಗರಹಾವುಗಳು ಪ್ರತ್ಯಕ್ಷಗೊಂಡಿವೆ.

ಹೊಸದುರ್ಗ ಆಲಯಿಲ್‌ನ  ಅಶೋಕನ್ ಎಂಬವರ ಹಿತ್ತಿಲಲ್ಲಿ ನಿನ್ನೆ ನಾಗರಹಾವು ಹಾದುಹೋಗುತ್ತಿದ್ದಾಗ ಅದರ ಮೇಲೆ ಮುಂಗುಸಿ ದಾಳಿ  ನಡೆಸಿದೆ. ಆಗ ಅವುಗಳ ನಡುವೆ ಘೋರ ಹೋರಾಟವೇ ನಡೆಯಿತು. ಅದನ್ನು ಕಂಡ ಮನೆಯವರು ತಕ್ಷಣ ಮನೆಯಲ್ಲಿದ್ದ ಬಲೆ ಬೀಸಿ ಹಾವು ಮತ್ತು ಮುಂಗುಸಿಯನ್ನು ಬಲೆಯೊಳಗೆ ಸಿಲುಕಿಸುವಲ್ಲಿ ಸಫಲರಾದರು. ಆದರೆ ಕೊನೆಗೆ ಮುಂಗುಸಿ ಬಲೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮುಂಗುಸಿಯ ದಾಳಿಯಿಂದ ಹಾವು ಗಾಯಗೊಂಡು ಕಂಗಾಲಾಗಿ ಅಲ್ಲೇ ಬಿದ್ದಿತ್ತು. ಬಳಿಕ ನೀಡಲಾದ ಮಾಹಿತಿಯಂತೆ ಅರಣ್ಯ ಇಲಾಖೆ ಸರ್ಪ ವಲಂಟಿಯರ್ ಕಿರಣ್ ಕುಮಾರ್ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆ ಹಿಡಿದು ಅರಣ್ಯ ಕಚೇರಿಗೆ ಸಾಗಿಸಿದರು.

ಶನಿವಾರದಂದು ಕಾರಡ್ಕ ಪುಂಡೂರು ಕೊಚ್ಚಿಯ ಗಾರೆ ಕಾರ್ಮಿಕ ಸದಾನಂದ ಎಂಬವರ ಮನೆಯೊಳಗೂ ನಾಗರಹಾವು ಪ್ರತ್ಯಕ್ಷಗೊಂಡಿದೆ. ಸದಾನಂದನವರ ಪತ್ನಿ ಸರಸ್ವತಿ ಬೀಡಿ ಕಾರ್ಮಿಕೆಯಾಗಿದ್ದು, ಅವರು ಮನೆಯೊಳಗೆ ಬೀಡಿ ಎಲೆ ಇರಿಸುತ್ತಿರುವ ತೊಟ್ಟೆಯೊಳಗೆ ನಾಗರ ಹಾವು  ಸುರುಟಿ ಮಲಗಿತ್ತು. ಬೀಡಿ ಕಟ್ಟಲೆಂದು ಸರಸ್ವತಿ ಆ ತೊಟ್ಟೆ ತೆಗೆಯಲೆಂದು ಬಂದಾಗಲಷ್ಟೇ ಅದರೊಳಗೆ ಹಾವು ಇರುವುದು ಅವರ ಗಮನಕ್ಕೆ ಬಂದಿದೆ. ಬಳಿಕ ನೀಡಿದ ಮಾಹಿತಿಯಂತೆ ಕರ್ಮಂತೋಡಿಯ ಬಾಳಾಕಂಡದ ಸರ್ಪ ವಲಂಟಿಯರ್ ಎಂ. ಸುನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಸಾಗಿಸಿದರು. ಇದರ ಹೊರತಾಗಿ ನಿನ್ನೆ ಮಾವುಂಗಲ್ ನಲ್ಲೂ ನಾಗರಹಾವೊಂದು ಪ್ರತ್ಯಕ್ಷಗೊಂಡಿತ್ತು. ಅದನ್ನು ಅರಣ್ಯ ಪಾಲಕರು ಸೆರೆ ಹಿಡಿದು ಸಾಗಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page