ಮಳೆಯಲ್ಲೇ ಶಾಲಾ ಕ್ರೀಡಾ-ಕಲಾ ಸ್ಪರ್ಧೆಗಳು: ವ್ಯಾಪಕ ರೋಷ

ಕಾಸರಗೋಡು: ಮಳೆಗೆ ಕ್ರೀಡಾಮೇಳ, ಕಲೋತ್ಸವ ನಡೆಸಲಿರುವ ಸರಕಾರದ ಕಡ್ಡಾಯ ಆಜ್ಞೆ ಅಧ್ಯಾಪಕರು ಹಾಗೂ ಹೆತ್ತವರು, ವಿದ್ಯಾರ್ಥಿಗಳನ್ನು ನಿರಾಶೆಗೊಳಿಸಿದೆ. ಕಲಾ-ಕ್ರೀಡಾ ಪ್ರೇಮಿಗಳು ಅತೃಪ್ತಿ ವ್ಯಕ್ತಪಡಿಸುತ್ತಾರೆ.

ಕಳೆದ ಒಂದು ವಾರದಿಂದ ಹೆಚ್ಚಾಗಿ ಮಳೆ ತೀವ್ರವಾಗಿ ಸುರಿದು ಕೊಂಡಿದೆ. ಈ ಮಧ್ಯೆ ಶಾಲಾ ಮಟ್ಟದ ಕ್ರೀಡೋತ್ಸವ ಇಂದು ಪೂರ್ತಿಗೊಳಿಸಿ ನಾಳೆ ಸಂಜೆಯ ಮುಂಚಿತವಾಗಿ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅರ್ಹರಾದವರ ಯಾದಿಯನ್ನು ಸಂಬಂಧಪಟ್ಟವರಿಗೆ ಇ-ಮೇಲ್ ಮಾಡಬೇಕೆಂದು ಅಧಿಕಾರಿಗಳು ನಿರ್ದೇಶಿಸಿರುವುದಾಗಿ ಶಾಲಾ ಅಧಿಕಾರಿಗಳು ತಿಳಿಸುತ್ತಾರೆ.  ಎಡೆಬಿಡದೆ ಸುರಿವ ಮಳೆಗೆ ಯಾವ ಆಟವನ್ನು ಎಲ್ಲಿ ಹೇಗೆ ನಡೆಸ ಬೇಕೆಂಬುದು ತಿಳಿಯದೆ ಶಾಲಾ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಮಕ್ಕಳನ್ನು  ಕೆಸರಲ್ಲಿ ಆಟ ಆಡಿಸಿ ರೋಗ ತಗಲುವಂತೆ ಮಾಡಲಿರುವ ಕಾರ್ಯವೇಕೆ ಎಂದು ಹೆತ್ತವರು ಪ್ರಶ್ನಿಸುತ್ತಾರೆ.

ಉಪಜಿಲ್ಲೆಯ ಕೆಲವು ಶಾಲೆಗಳಲ್ಲಿ ಕ್ರೀಡಾಮೇಳವನ್ನು ತರಗತಿ ಕೊಠಡಿಗಳಲ್ಲಿ ಪೂರ್ತಿ ಗೊಳಿಸಿರುವುದಾಗಿ ಹೇಳಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಮಳೆ ಕಡಿಮೆಯಾಗಲು ಕಾಯುತ್ತಿದ್ದಾರೆ. ಇದರಿಂದಾಗಿ ಅಧ್ಯಯನದ ಜೊತೆ ಕ್ರೀಡಾ ಸಾಮರ್ಥ್ಯವೂ ಶಾಲೆಗಳಲ್ಲಿ ಹಳಿ ತಪ್ಪುತ್ತಿದೆ. ಉಪಜಿಲ್ಲಾ ಕ್ರೀಡೋತ್ಸವ ಅ. ೪ರಿಂದ ೭ರವರೆಗೆ ಬದಿಯಡ್ಕದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಇದೇ ವೇಳೆ ಮುಂದಿನ ತಿಂಗಳ ೩೦ರಂದು ಆರಂಭಿಸಲಿರುವ ಉಪಜಿಲ್ಲಾ ಕಲೋತ್ಸವಕ್ಕೆ  ಅರ್ಹತೆ ಪಡೆದವರ ಹೆಸರನ್ನು ಕೂಡಾ ನೀಡಲು ಮೇಲಧಿಕಾರಿಗಳು ನಿರ್ದೇಶಿಸಿದ್ದಾರೆ ಎಂದು ಶಾಲೆಯ ಅಧಿಕಾರಿಗಳು ತಿಳಿಸುತ್ತಾರೆ. ಇದಕ್ಕಾಗಿ ಶಾಲಾ ಅಂಗಣದಲ್ಲಿ ಮಳೆ ನೀರು ಬೀಳದಂತಹ ಚಪ್ಪರವನ್ನು ಸಿದ್ಧಪಡಿಸಲಾಗುತ್ತಿದೆ. ಆದರೆ ಈ ರೀತಿಯ ಚಪ್ಪರಕ್ಕೆ ಬಹಳ ವೆಚ್ಚ ತಗಲುತ್ತಿದ್ದು ಇದಕ್ಕೆ ಸರಕಾರ ಅಥವಾ ಶಿಕ್ಷಣ ಇಲಾಖೆ ಸಹಾಯ ನೀಡುತ್ತಿಲ್ಲ ಎಂಬ ಆರೋಪವೂ ಇದೆ.

Leave a Reply

Your email address will not be published. Required fields are marked *

You cannot copy content of this page