ಮಹಾ ಶಿವರಾತ್ರಿ ನಾಳೆ: ವಿವಿಧ ಶಿವ ಕ್ಷೇತ್ರಗಳಲ್ಲಿ ವೈವಿಧಮಯ ಕಾರ್ಯಕ್ರಮಗಳು
ಕಾಸರಗೋಡು: ಜಿಲ್ಲೆಯ ವಿವಿಧ ಶಿವ ಕ್ಷೇತ್ರಗಳಲ್ಲಿ ನಾಳೆ ಮಹಾ ಶಿವರಾತ್ರಿಯಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶಿವಪಂಚಾಕ್ಷರಿ ಜಲ ಲಿಪಿ ಅಭಿಯಾನ, ಪುಸ್ತಕ ಬಿಡುಗಡೆ ಸಮಾರಂಭ ಕ್ಷೇತ್ರದ ಉಮಾಮಹೇಶ್ವರ ಸಭಾಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಮಾತೃಸಮಿತಿ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸುವರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಸ್ತಾಪಿಸುವರು. ಮಲ್ಲಿಕಾ ಪ್ರಶಾಂತ್ ಪುಸ್ತಕ ಬಿಡುಗಡೆಗೊಳಿಸುವರು. ಹಲವರು ಭಾಗವಹಿಸುವರು.
ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ ೬ಕ್ಕೆ ದೀಪ ಪ್ರತಿಷ್ಠೆ, ಗಣಹೋಮ, ಭಜನೆ, ಏಕದಶ ರುದ್ರಾಭಿಷೇಕ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಜಿಲ್ಲೆಯ ಇತರ ಶಿವ ಕ್ಷೇತ್ರಗಳಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಮದನಂತೇಶ್ವರ, ಪರಕ್ಕಿಲ ಶ್ರೀ ಮಹಾದೇವ, ಪುಳ್ಕೂರು ಶ್ರೀ ಮಹಾದೇವ, ಅಡೂರು ಶ್ರೀ ಮಹಾಲಿಂಗೇಶ್ವರ ಸಹಿತ ವಿವಿಧ ದೇವಸ್ಥಾನಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದೆ.