ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಆರೋಪಿ ಕೊನೆಗೂ ಪೊಲೀಸರ ಬಲೆಗೆ: ಎರಡು ವಾಹನ ವಶ
ಕಾಸರಗೋಡು: ದ್ವಿಚಕ್ರ ವಾಹನಗಳಲ್ಲಿ ಬಂದು ರಸ್ತೆಯಲ್ಲಿ ನಡೆದು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ.
ಬೇಕಲ ಮಾಂಙಾಡ್ಗೆ ಸಮೀಪದ ಕೂವತ್ತೊಟ್ಟಿ ನಿವಾಸಿ ಯಾದ ೩೧ರ ಹರೆಯದ ಯುವಕ ಪೊಲೀಸರ ಬಲೆಗೊಳಗಾದ ಆರೋ ಪಿಯಾಗಿದ್ದಾನೆಂದು ತಿಳಿದು ಬಂದಿದೆ. ಈತ ಉಪಯೋಗಿಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೇಕಲ, ಮೇಲ್ಪರಂಬ, ವಿದ್ಯಾನಗರ, ಬೇಡಡ್ಕ, ಹೊಸದುರ್ಗ ಮೊದಲಾದೆಡೆಗಳಲ್ಲಿ ಇತ್ತೀಚೆಗಿನ ಕೆಲವು ತಿಂಗಳಿನಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯ ಕುತ್ತಿಗೆಯಿಂದ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಹಲವು ಘಟನೆಗಳು ನಡೆದಿದೆ. ಆದರೆ ಹೀಗೆ ಸರ ಎಗರಿಸುತ್ತಿರುವ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತಿಂಗಳು ಗಳಿಂದ ಶತ ಪ್ರಯತ್ನ ನಡೆಸಿದರೂ ಅದೆಲ್ಲಾ ವಿಫಲಗೊಂಡಿತ್ತು. ಕೊನೆಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾ ನೀಡಿದ ನಿರ್ದೇಶದಂತೆ ಪ್ರತೀ ಪೊಲೀಸ್ ಠಾಣೆಗಳ ತಲಾ ಇಬ್ಬರು ಪೊಲೀಸರು ಒಳಗೊಂಡ ವಿಶೇಷ ಪೊಲೀಸ್ ತಂಡಕ್ಕೆ ರೂಪು ನೀಡಿ, ಆ ತಂಡಕ್ಕೆ ಚಿನ್ನ ಎಗರಿಸುವ ಕಳ್ಳರ ಪತ್ತೆಗಾಗಿರುವ ಕರ್ತವ್ಯವನ್ನು ಮಾತ್ರವೇ ವಹಿಸಿಕೊಡಲಾಗಿತ್ತು. ಆ ತಂಡ ನಡೆಸಿದ ನಿರಂತರ ಕಾರ್ಯಾ ಚರಣೆಯಲ್ಲಿ ಚಿನ್ನದ ಸರ ಎಗರಿಸುವ ಜಾಲಕ್ಕೆ ಸೇರಿದ ಈ ಆರೋಪಿಯನ್ನು ಪತ್ತೆ ಹಚ್ಚಿ ತಮ್ಮ ಬಲೆಗೆ ಬೀಳಿಸುವಲ್ಲಿ ಕೊನೆಗೂ ಸಫಲವಾಗಿದೆ.