ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ ವ್ಯಕ್ತಿಯನ್ನು ಬೆನ್ನಟ್ಟಿ ಸೆರೆಹಿಡಿದ ಊರವರು
ಕಾಸರಗೋಡು: ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಲೆತ್ನಿಸಿದ ವ್ಯಕ್ತಿಯನ್ನು ಊರವರೇ ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬಂದಡ್ಕ ಬೇತಾಲಂ ಪೂಡಂಕಲ್ಲಿನ ಅಜಿತ್ ಭವನದ ಹರಿಪ್ರಸಾದ್ (೫೯) ಪೊಲೀಸರ ವಶಕ್ಕೊಳಗಾದ ಆರೋಪಿ. ಬಂದಡ್ಕ ಪಡ್ಪು ಸೈಂಟ್ ಜೋರ್ಜ್ ಇಗರ್ಜಿ ಸಮೀಪ ಆಯುರ್ವೇದ ಅಂಗಡಿ ನಡೆಸುತ್ತಿರುವ ತಂಗಮ್ಮ (೭೯) ಎಂಬವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲಾಗಿದೆ. ಈ ಅಂಗಡಿಗೆ ಆಯುರ್ವೇದ ಔಷಧಿ ಖರೀದಿಸುವ ಸೋಗಿನಲ್ಲಿ ಬಂದ ಆರೋಪಿ ಹರಿಪ್ರಸಾದ್ ತನ್ನ ಕೈಯಲ್ಲಿದ್ದ ಬಾಟಲಿಯಲ್ಲಿ ತುಂಬಿಸಿಡಲಾಗಿದ್ದ ಕೀಟನಾಶಕವನ್ನು ತಂಗಮ್ಮರ ಮುಖಕ್ಕೆ ಎರಚಿ ಕೂಡಲೇ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಲೆ ತ್ನಿಸಿರುವುದಾಗಿ ದೂರಲಾಗಿದೆ. ಅದನ್ನು ಕಂಡ ಊರವರು ತಕ್ಷಣ ಆತನನ್ನು ಬೆನ್ನಟ್ಟಿ ಸೆರೆಹಿಡಿದು ಬಳಿಕ ಬೇಡಗಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ತಂಗಮ್ಮರ ಕುತ್ತಿಗೆಯಿಂದ ಕಳ್ಳರು ಈ ರೀತಿ ಚಿನ್ನದ ಸರ ಎಗರಿ ಸುತ್ತಿರುವುದು ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿಯಾಗಿದೆ. ಕೆಲವು ತಿಂಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಆಯುರ್ವೇದ ಔಷಧಿ ಖರೀದಿ ಸೋಗಿನಲ್ಲಿ ಬಂದ ಮೂವರು ಯುವಕರು ತಂಗಮ್ಮರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಹೀಗೆ ಅಂದು ಚಿನ್ನದ ಸರ ಎಗಹರಿಸಿದ ಆರೋಪಿಗಳು ಬಳಿಕ ಬೇರೊಂದು ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಅಂದು ನಷ್ಟಗೊಂಡ ತಂಗಮ್ಮರ ಚಿನ್ನದ ಸರವನ್ನು ಬಳಿಕ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.