ಮಾದಕದ್ರವ್ಯ ವ್ಯಸನ ವಿರುದ್ಧ ಅರಿವು ಮೂಡಿಸಬೇಕೆಂಬ ವಿಶೇಷ ನಿಬಂಧನೆಯಡಿ ಎಂಡಿಎಂಎ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ

ಕಾಸರಗೋಡು: ಮಾದಕದ್ರವ್ಯ ವ್ಯಸನದ ವಿರುದ್ಧ ಬಹಿರಂಗವಾಗಿ ಐದು ದಿನಗಳ ತನಕ ಅರಿವು ಮೂಡಿಸುವ ಕೆಲಸ ನಡೆಸಬೇಕೆಂಬ ವಿಶೇಷ ನಿಬಂಧನೆಗಳ ಅಡಿ ಎಂಡಿ ಎಂಎ ಪ್ರಕರಣದ  ಆರೋಪಿಯಾಗಿ ರುವ ಯುವಕನಿಗೆ ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಹೊಸದುರ್ಗ ಪಡನ್ನಕ್ಕಾಡ್ ಕುರುಞಾರಿನ ಶಫ್ರೀನಾ ಮಂಜಿಲ್‌ನ ಅಬ್ದುಲ್ ಸಫ್ವಾನ್ (25) ಎಂಬಾತನಿಗೆ ಇಂತಹ ಅಪರೂಪದ ನಿಬಂಧನೆಯಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

2024 ಮೇ 18ರಂದು ಹೊಸದುರ್ಗ ಮಯ್ಯತ್ತ್ ರಸ್ತೆ ಯಲ್ಲಿ ಹೊಸದುರ್ಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 3.06 ಗ್ರಾಂ ಎಂಡಿಎಂಎ ಸಹಿತ ಅಬ್ದುಲ್ ಸಫ್ವಾನ್‌ನನ್ನು   ಬಂಧಿಸಿದ್ದರು. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಮಾತ್ರವಲ್ಲ ಹೊಸದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್  ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯದ  ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿ ಜಾಮೀನು ಕೋರಿ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಅದನ್ನು ಪರಿಶೀಲಿಸಿದ ನ್ಯಾಯಾಲಯ ನೀವು ಮದ್ಯ ಹಾಗೂ ಮಾದಕದ್ರವ್ಯ ಸೇವನೆ ತ್ಯಜಿಸಿರಿ, ಮಾದಕದ್ರವ್ಯ ಸೇವನೆ ಕೇವಲ ನಿಮ್ಮ ಮಾತ್ರವಲ್ಲ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೀವನವನ್ನು ಹಾಳು ಮಾಡಲಿದೆ ಎಂದು ಲಿಖಿತ ರೂಪದಲ್ಲಿ ಬರೆದ ಅರಿವು ಮೂಡಿಸುವ ಫಲಕದೊಂದಿಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ  ವಿವಿಧ ಕೇಂದ್ರಗಳಲ್ಲಿ ಐದು ದಿನಗಳ ತನಕ ಅರಿವು ಮೂಡಿಸುವ ಕೆಲಸ ನಡೆಸಬೇಕು. 

ಹೀಗೆ ಆರೋಪಿ ಅರಿವು ಮೂಡಿಸುವಂತೆ ಮಾಡುವುದರ ವೀಡಿಯೋ ಚಿತ್ರೀಕರಣವನ್ನು ನಡೆಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಲಯ ಇನ್ನೊಂದೆಡೆ ಪೊಲೀಸರಿಗೂ ನಿರ್ದೇಶ ನೀಡಿದೆ. ಇಂತಹ ವಿಶೇಷ ನಿಬಂಧನೆಯಡಿ ನ್ಯಾಯಾಲಯ ಬಳಿಕ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

Leave a Reply

Your email address will not be published. Required fields are marked *

You cannot copy content of this page