ಮಾಸಿಕುಮೇರಿ- ಕುರುಡಪದವು ರಸ್ತೆ ಶೋಚನೀಯಾವಸ್ಥೆಯಲ್ಲಿ

ಪೈವಳಿಕೆ: ನಾಲ್ಕೂವರೆ ಕೋಟಿ ರೂ. ರಸ್ತೆ ಮರು ಡಾಮರೀಕರಣಕ್ಕೆ ಮಂಜೂರಾಗಿದೆ ಎಂದು ಅಧಿಕಾರಿ ಗಳು ತಿಳಿಸಿ ನಾಲ್ಕು ತಿಂಗಳಾದರೂ ರಸ್ತೆ ದುರಸ್ತಿಗೆ ಯಾವುದೇ ಕ್ರಮ ಉಂಟಾಗಲಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಲೋಕೋಪಯೋಗಿ ಇಲಾಖೆಯ ಮಾಸಿಕುಮೇರಿ- ಕುರುಡಪದವು ರಸ್ತೆ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದಾಗ ದುರಸ್ತಿಗೆ ಹಣ ಮಂಜೂರಾಗಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ಆದರೆ ಇದುವರೆಗೂ ದುರಸ್ತಿಗೆ ಕ್ರಮವುಂಟಾಗಲಿಲ್ಲ. ಪೈವಳಿಕೆ ಪಂ.ನ ಮಾಸಿಕುಮೇರಿಯಿಂದ ಕುರುಡಪದವು ವರೆಗಿನ  ೮ ಕಿಲೋ ಮೀಟರ್ ರಸ್ತೆ ಶೋಚನೀಯ ಸ್ಥಿತಿಗೆ ತಲುಪಿ ಹಲವು ವರ್ಷಗಳು ಕಳೆದಿದೆ. ಅಗಲ ಕಿರಿದಾದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದೆ. ದಿನ ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಕರ್ನಾಟಕಕ್ಕೆ ಸಂಪರ್ಕ ನೀಡುವ ರಸ್ತೆಯೂ ಆಗಿದೆ. ಪಂ.ನ ನಾಲ್ಕು ವಾರ್ಡ್‌ಗಳು ಸಂಗಮಿಸುವ ಪ್ರದೇಶವಿದಾಗಿದ್ದು, ವಿವಿಧ ಪಕ್ಷಗಳ ಜನಪ್ರತಿನಿಧಿಗಳು ದಿನನಿತ್ಯ ಸಂಚರಿಸುವ ರಸ್ತೆಯೂ ಇದಾಗಿದೆ. ಆದರೂ ಈ ರಸ್ತೆಯ ಅಭಿವೃದ್ಧಿಗೆ ಸಾಕಷ್ಟ ಒತ್ತಡ ಇವರಿಂದ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಮಳೆ, ಚುನಾವಣೆ ಮುಂಚಿತವಾಗಿ ರಸ್ತೆ ದುರಸ್ತಿಗೊಳಿಸಬೇಕೆಂದೂ, ಇಲ್ಲದಿದ್ದರೆ ಈ ರೂಟ್‌ನಲ್ಲಿ ಬಸ್ ಸಂಚಾರ ಮೊಟಕುಗೊಳಿಸುವುದಾಗಿ ಬಸ್ ಮಾಲಕರು, ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page