ಮೀನು ಕಾರ್ಮಿಕನಿಗೆ ತಂಡದಿಂದ ಹಲ್ಲೆ: ಕೈ ಎಲುಬು ಮುರಿದ ವ್ಯಕ್ತಿ ಆಸ್ಪತ್ರೆಯಲ್ಲಿ
ಕುಂಬಳೆ: 20 ಮಂದಿಯ ತಂಡವೊಂದು ಮೀನು ಕಾರ್ಮಿಕನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಕೈಯ ಮೂಳೆ ಮುರಿದಿರುವುದಾಗಿ ದೂರಲಾಗಿದೆ.
ಕೊಯಿಪ್ಪಾಡಿ ಕಡಪುರದ ಅಬ್ದುಲ್ಲ ಕುಂಞಿ (42) ಎಂಬವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಇವರು ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ಕೊಯಿಪ್ಪಾಡಿ ಕಡಪ್ಪುರ ಜಂಕ್ಷನ್‌ನಲ್ಲಿ 20 ಮಂದಿ ತಂಡ ತಡೆದು ನಿಲ್ಲಿಸಿ ರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿದೆಯೆಂದೂ ಇದರಿಂದ ಕೈಯ ಮೂಳೆ ಮುರಿದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ಕುಂಬಳೆ ಪೇಟೆಯಲ್ಲಿ ಅಬ್ದುಲ್ಲ ಕುಂಞಿ ಹಾಗೂ ಬೇರೊಬ್ಬ ವ್ಯಕ್ತಿ ಮಧ್ಯೆ ವಾಗ್ವಾದ ನಡೆದಿತ್ತು. ಅದರ ಮುಂದುವರಿಕೆಯಾಗಿ ಅನ್ವರ್, ಆಶಿಕ್, ಶಂಸೀರ್ ಎಂಬಿವರನ್ನೊಳ ಗೊಂಡ ತಂಡ ಹಲ್ಲೆಗೈದಿರುವುದಾಗಿ ಗಾಯಾಳು ಆರೋಪಿಸಿದ್ದಾರೆ.