ಮುಂದುವರಿದ ಅಬಕಾರಿ ದಾಳಿ; ಬೃಹತ್ ಪ್ರಮಾಣದ ಮದ್ಯ ವಶ
ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಜಿಲ್ಲೆಯಾದ್ಯಂತ ಮತ್ತೆ ಬಿಗು ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ಕಾಸರಗೋಡು ನಗರದ ಎರಡೆಡೆಗಳಲ್ಲಿ ನಡೆಸ ಲಾದ ದಾಳಿಯಲ್ಲಿ ಬೃಹತ್ ಪ್ರಮಾಣದ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.
ನಗರದ ಬೀರಂತಬೈಲ್ನಲ್ಲಿ ಕಾಸರಗೋಡು ಅಬಕಾರಿ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ೧೮೦ ಎಂಎಲ್ನ ೩೩೬ ಟೆಟ್ರಾ ಪ್ಯಾಕೆಟ್ (೬೦.೪೮ ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಅದನ್ನು ತಂದಿರಿಸಿದ ವ್ಯಕ್ತಿ ವೇಳೆ ಅಲ್ಲಿಂದ ಪರಾರಿ ಯಾಗಿದ್ದನು. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ರಮಾ ಕೆ, ಪ್ರಶಾಂತ್ ಪಿ, ಗೀತಾ ಟಿ.ವಿ ಎಂಬಿವರು ಒಳಗೊಂಡಿದ್ದರು.
ಇದೇ ರೀತಿ ಮಧೂರು ಅರಂತೋಡಿನಲ್ಲಿ ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಎ.ವಿ. ರಾಜೀವ್ ನೇತೃತ್ವದ ತಂಡ ನಿನ್ನೆ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೩.೦೬ ಲೀಟರ್ (೧೮೦ ಎಂಎಲ್ನ ೧೭ ಪ್ಯಾಕೆಟ್) ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ವಿವಿಧ ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾದ ಅರಂತೋಡು ನಿವಾಸಿ ಈ ಮಾಲನ್ನು ಅಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ಲಭಿಸಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಐಬಿ ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ, ಸಿವಿಲ್ ಎಕ್ಸೈಸ್ ಆಫೀಸರ್ ರಾಜೇಶ್ ಪಿ ಎಂಬಿವರು ಒಳಗೊಂಡಿದ್ದರು.