ಮುಖವಾಡಧಾರಿ ತಂಡದಿಂದ ವೃದ್ದ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನ ದರೋಡೆ

ಕಾಸರಗೋಡು: ವೃದ್ದ ದಂಪತಿಗಳು ಮಾತ್ರವೇ ವಾಸಿಸುತ್ತಿರುವ ಮನೆಗೆ   ಮುಖವಾಡ ಧರಿಸಿ ಅಕ್ರಮವಾಗಿ ಮನೆಗೆ ಪ್ರವೇಶಿಸಿದ ದರೋಡೆಕೋರರ ತಂಡ ವೃದ್ಧ ದಂಪತಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿ ಚಿನ್ನದ ಒಡವೆ ದರೋಡೆಗೈದ ಘಟನೆ ಚೆಮ್ನಾಡ್ ಬಳಿ ಇಂದು ಮುಂಜಾನೆ ನಡೆದಿದೆ.

ಚೆಮ್ನಾಡ್ ಪರವನಡ್ಕಕ್ಕೆ ಸಮೀಪದ ಕೈಂದಾರಿನ ಕೋಡೋತ್ತ್ ಹೌಸಿನ ಕೋಡೋತ್ತ್ ಕುಂಞಿ ಕಣ್ಣನ್ ನಂಬ್ಯಾರ್ (೭೮) ಎಂಬವರ ಮನೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಈ ಮನೆಯಲ್ಲಿ ಕುಂಞಿಕಣ್ಣನ್ ನಂಬ್ಯಾರ್ ಮತ್ತು ಅವರ ಪತ್ನಿ ತಂಗಮಣಿ (೭೦) ಮಾತ್ರವೇ ನೆಲೆಸಿದ್ದಾರೆ. ಅಲ್ಲೇ ಪಕ್ಕದ ಪರವನಡ್ಕದಲ್ಲಿ ನಿನ್ನೆ ರಾತ್ರಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯುತ್ತಿತ್ತು. ಅದರಿಂದಾಗಿ ಆ ಪರಿಸರದ ಜನರ ಪೂರ್ಣ ಗಮನ ಆ ಪಂದ್ಯಾಟದತ್ತ ಕೇಂದ್ರೀ ಕೃತವಾಗಿತ್ತು. ಇದೇ ಸಮಯ ನೋಡಿ ಮುಖ ವಾಡ ಧರಿಸಿ ಬಂದ ಮೂವರು ದರೋಡೆಕೋರರು ಇಂದು ಮುಂಜಾನೆ ಕುಂಞಿಕಣ್ಣನ್ ನಂಬ್ಯಾರ್‌ರ ಮನೆಗೆ ಅಕ್ರಮವಾಗಿ ನುಗ್ಗಿ ಬಂದು ಕುಂಞಿಕಣ್ಣನ್ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಿ  ಚಾಕು ಬೀಸಿ ಕೊಲೆ ಬೆದರಿಕೆ ಒಡ್ಡಿ, ತಂಗಮಣಿಯವರ ದೇಹದಲ್ಲಿದ್ದ ಚಿನ್ನದ ಒಡವೆಗಳನ್ನು ಕಳಚಿ ತೆಗೆದರು. ಮಾತ್ರವಲ್ಲದೆ ಕಪಾಟಿನೊಳಗಿದ್ದ ಚಿನ್ನ ಸೇರಿದಂತೆ ಸುಮಾರು ಎಂಟು ಪವನ್‌ನಷ್ಟು ಚಿನ್ನದ ಒಡವೆ ದರೋಡೆಗೈದು ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ತಂಗಮಣಿಯವರು ನೆರೆಮನೆಯ ಮಹಿಳೆಯೋರ್ವರಲ್ಲಿ  ನಡೆದ ವಿಷಯ ತಿಳಿಸಿದ್ದಾರೆ. ಆಗಲಷ್ಟೇ ದರೋಡೆ ವಿಷಯ ಊರವರ ಗಮನಕ್ಕೆ ಬಂದಿದೆ. ಆ ಕೂಡಲೇ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದವರು ಸೇರಿದಂತೆ ಊರವರು ದರೋಡೆಕೋರರಿಗಾಗಿ ವ್ಯಾಪಕ ಶೋಧ ನಡೆಸಿದ್ದರೂ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ದರೋಡೆಕೋರರು ತಮಿಳು ಭಾಷೆಯಲ್ಲಿ ತಮ್ಮಲ್ಲಿ ಮಾತನಾಡಿದ್ದರೆಂದು ಕುಂಞಿಕಣ್ಣನ್ ನಂಬ್ಯಾರ್ ತಿಳಿಸಿದ್ದಾರೆ.

ಅವರು ನೀಡಿದ ದೂರಿನ ಪ್ರಕಾರ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು.  ಶ್ವಾನದಳದವರನ್ನು ಕರೆಸಿ ಶೋಧ ನಡೆಸಲಾಯಿತು. ಬೆರಳಚ್ಚು ತಜ್ಞರು ಆಗಮಿಸಿ  ಆ ಮನೆಯಿಂದ  ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ವೃದ್ದ ದಂಪತಿಗಳು ಮಾತ್ರವೇ ನೆಲೆಸಿರುವ ಮನೆಯಲ್ಲಿ ನಡೆದ ಈ ದರೋಡೆಯನ್ನು ಪೊಲೀಸರು ಅತಿ ಗಂಭೀರವಾಗಿ ಪರಿಗಣಿಸಿದ್ದಾರೆ. ದರೋಡೆ ಕೋರರ ಪತ್ತೆಗಾಗಿ ವ್ಯಾಪಕ ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page