ಮುಗು ಪರಿಸರದಲ್ಲಿ ಶಂಕಾಸ್ಪದ ತಂಡದಿಂದ ತಿರುಗಾಟ: ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು
ಸೀತಾಂಗೋಳಿ: ಸೇವಾ ಟ್ರಸ್ಟ್ನ ಹೆಸರಲ್ಲಿ ಮುಗು ಹಾಗೂ ಪರಿಸರ ಪ್ರದೇಶದಲ್ಲಿ ಬಟ್ಟೆಬರೆ ಸಂಗ್ರಹಕ್ಕಾಗಿ ತಲುಪುವ ತಂಡದ ಬಗ್ಗೆ ಸ್ಥಳೀಯರಿಗೆ ಶಂಕೆ ಉಂಟಾಗಿದೆ. ಕಳೆದ ಮೂರು ದಿನಗಳಿಂದ ಈ ಪರಿಸರದ ಮನೆಗಳಿಗೆ ಈ ತಂಡ ಹಳೆಯ ಬಟ್ಟೆಬರೆಗಳನ್ನು ಕೇಳಿ ತಲುಪುತ್ತಿದೆ. ಇದೇ ರೀತಿ ಅಮೆತ್ತೋಡು ನಿವಾಸಿ ಮನೆಗೆ ತಲುಪಿದ ಓರ್ವನ ವರ್ತನೆಯಲ್ಲಿ ಶಂಕೆ ತೋರಿ ಆತನ ಹೆಸರೇನು ಎಂದು ಕೇಳಿದಾಗ ಪ್ರಕಾಶ್ ಶಿರಸಿ ಎಂದು ತಿಳಿಸಿದ್ದಾನೆನ್ನಲಾಗಿದೆ. ಆದರೆ ಆತನ ಕೊರಳಿನಲ್ಲಿರುವ ಟ್ಯಾಗ್ನಲ್ಲಿ ಯಾವುದೋ ಚಾರಿಟೇಬಲ್ ಟ್ರಸ್ಟ್ನ ಹೆಸರಿದ್ದು, ಪಾಲಕ್ಕಾಡ್ ಎಂದು ನಮೂದಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆತನ ಆಧಾರ್ ಕಾರ್ಡ್ ಕೇಳಿದಾಗ ಅದರಲ್ಲಿ ಹೆಸರು ಪರಮೇಶ್ವರ್ ಎಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಕೂಡಲೇ ಬದಿಯಡ್ಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದೇ ರೀತಿ ಈ ಪರಿಸರದಲ್ಲಿ ಹಲವು ಮಂದಿ ತಿರುಗಾಡುತ್ತಿದ್ದಾರೆನ್ನಲಾಗಿದೆ. ಇವರು ಬೈಕ್ಗಳಲ್ಲಿ ಸಂಚರಿಸುತ್ತಿದ್ದು, ಆದರೆ ಅದಕ್ಕೆ ನಂಬರ್ ಪ್ಲೇಟ್ ಇಲ್ಲ ಎಂದಿದ್ದಾರೆ. ಈ ಎಲ್ಲಾ ವಿಷಯಗಳಲ್ಲಿ ಸ್ಥಳೀಯರು ಅನುಮಾನ ಹೊಂದಿದ್ದು, ಇವರ ಸಂಚಾರ ನಿಗೂಢತೆಯಿಂದ ಕೂಡಿದೆ ಎಂದಿದ್ದಾರೆ. ಕಳವು, ದರೋಡೆ ಉದ್ದೇಶವಿರಿಸಿ ಈ ತಂಡ ಇಲ್ಲಿ ಸುತ್ತಾಡುತ್ತಿರಬಹುದೆಂದೂ ಸ್ಥಳೀಯರು ಶಂಕಿಸಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಿದ್ದರೂ ಯಾವುದೇ ಸುಳಿವು ಲಭಿಸಿಲ್ಲವೆನ್ನಲಾಗಿದೆ. ಈ ಪರಿಸರದ ಓರ್ವರ ಮನೆಯಿಂದ ಹಾಡ ಹಗಲೇ ಚಿನ್ನಾಭರಣ ಕಳವು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಇವರ ಬಗ್ಗೆ ಭೀತಿ ವ್ಯಕ್ತಪಡಿಸುತ್ತಾರೆ.