ಮೂಡುಶೆಡ್ಡೆಯಲ್ಲಿ ಗುಂಡು ಹಾರಿದ ಘಟನೆ ಪೊಲೀಸ್ ತನಿಖೆಯಿಂದ ಟ್ವಿಸ್ಟ್ ಬಹಿರಂಗ
ಮಂಗಳೂರು: ಮೂಡುಶೆಡ್ಡೆ ಯಲ್ಲಿ ಕೋವಿಯಿಂದ ಗುಂಡು ಹಾರಿದ ಪ್ರಕರಣದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಅಕ್ರಮವಾಗಿ ಪಿಸ್ತೂಲು ಇಟ್ಟುಕೊಂಡಿದ್ದ ನಿಷೇಧಿತ ಸಂಘಟನೆ ಪಿಎಫ್‌ಐ ನಂಟು ಈ ವಿಷಯದಲ್ಲಿ ಬಯಲಾಗಿದೆ. ಆಕಸ್ಮಿಕವಾಗಿ ಕೋವಿ ಸಿಡಿದು ಹೊಟ್ಟೆಗೆ ಗುಂಡೇಟು ಬಿದ್ದರೂ ಒಳಸಂಚು ಬಹಿರಂಗಗೊಳ್ಳುತ್ತದೆ ಎಂಬ ಭೀತಿಯಲ್ಲಿ ಅದನ್ನು ಮುಚ್ಚಿಹಾಕಲು ಯತ್ನಿಸಿದ್ದ ಘಟನೆ ಬಗ್ಗೆ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಜನವರಿ ೬ರಂದು ಮಧ್ಯಾಹ್ನ ಮೂಡುಶೆಡ್ಡೆಯ ಗುಜರಿ ಮಾರಾಟದಂಗಡಿಯಲ್ಲಿ ಪಿಸ್ತೂಲ್ ಸಿಡಿದಿತ್ತು. ಸ್ಥಳೀಯ ಮಸೀದಿಯ ಧರ್ಮಗುರು ಮೊಹಮ್ಮದ್ ಸಫ್ವಾನ್ ಗಾಯಗೊಂಡಿದ್ದರು. ಮಧ್ಯಾಹ್ನ ಘಟನೆ ನಡೆದರೂ ಅವರನ್ನು ಆಸ್ಪತ್ರೆಗೆ ದಾಖಲಿಸದೆ ರಹಸ್ಯವಾಗಿ ಗುಂಡನ್ನು ತೆಗೆಯಲು ಪ್ರಯತ್ನಿಸಿ ರಾತ್ರಿ ವೇಳೆಗೆ ಅಡ್ಯಾರ್‌ನಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಸಫ್ವಾನ್ ತಾನು ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದಾಗ ಆಕಸ್ಮಿಕವಾಗಿ ಸಿಡಿದಿರುವುದಾಗಿ ಕಥೆ ಕಟ್ಟಿ ಹೇಳಿದ್ದರು. ಅಲ್ಲದೆ ಪಿಸ್ತೂಲಿಗೆ ಲೈಸನ್ಸ್ ಇದ್ದು, ಇದು ಭಾಸ್ಕರ್ ಎಂಬವರದ್ದಾಗಿದೆ ಎಂದು ತಿಳಿಸಿದ್ದರು. ಆಸ್ಪತ್ರೆಯಿಂದ ಲಭಿಸಿದ ಮಾಹಿತಿಯಂತೆ ಪೊಲೀಸರು ತನಿಖೆ ಆರಂಭಿಸಿದಾಗ ಕೃತ್ಯದ ಒಳಗುಟ್ಟು ಬಹಿರಂಗಗೊಂಡಿದೆ.
ಘಟನೆ ನಡೆದಿರುವ ಗುಜರಿ ಅಂಗಡಿ ಸ್ಥಳೀಯ ರೌಡಿಶೀಟರ್ ಅದ್ದು ಯಾನೆ ಬದ್ರುದ್ದೀನ್ ಎಂಬಾತನದ್ದಾಗಿದ್ದು, ಸಿಡಿದ ಕೋವಿ ಕೂಡಾ ಆತನದ್ದಾಗಿತ್ತು. ಆದರೆ ಇದಕ್ಕೆ ಪರವಾನಗಿ ಇರಲಿಲ್ಲ. ಇನ್ನೋರ್ವ ಗೂಂಡಾ ಇಮ್ರಾನ್ ಎನ್ನುವಾತ ಈ ಪಿಸ್ತೂಲನ್ನು ಬದ್ರುದ್ದೀನ್‌ಗೆ ನೀಡಿದ್ದ. ಪೊಲೀಸರು ಕೊಲೆ ಯತ್ನ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಿಸಿದ್ದು, ಅದ್ದು ಮತ್ತು ಇಮ್ರಾನ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೇರಳದಿಂದ ತರಿಸಿಕೊಂಡಿದ್ದ ಪಿಸ್ತೂಲನ್ನು ಬದ್ರುದ್ದೀನ್ ತನ್ನ ಅಂಗಡಿಯಲ್ಲಿ ಕುಳಿತು ಕೈಯಲ್ಲಿ ಹಿಡಿದುಕೊಂಡಿ ದ್ದಾಗಲೇ ಆಕಸ್ಮಿಕ ಉಂಟಾಗಿದೆ. ಈ ವೇಳೆ ಗುಂಡು ಅಲ್ಲಿದ್ದ ಪ್ರಿಂಟರ್ ಯಂತ್ರಕ್ಕೆ ಬಿದ್ದು ಅಂಗಡಿಯ ಹೊರಗೆ ಕುಳಿತುಕೊಂಡಿದ್ದ ಸಫ್ವಾನ್‌ನ ಹೊಟ್ಟೆಗೆ ತಗಲಿತ್ತು. ಆದರೆ ಈ ವಿಚಾರದಲ್ಲಿ ನಾಟಕವಾಡಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.