ಮೈದಾನದಲ್ಲಿ ಪಟಾಕಿ ಸಿಡಿದು ನಾಯಿ ಸಾವು: ಕುಂಬಳೆ ಭಾಸ್ಕರನಗರದಲ್ಲಿ ಆತಂಕ
ಕುಂಬಳೆ: ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಪಟಾಕಿ ಸಿಡಿದು ನಾಯಿಯೊಂದು ಸಾವಿಗೀಡಾದ ಘಟನೆ ಕುಂಬಳೆ ಭಾಸ್ಕರನಗರದಲ್ಲಿ ನಡೆ ದಿದೆ. ಭಾಸ್ಕರನಗರದ ಮೈದಾನದಿಂದ ನಿನ್ನೆ ರಾತ್ರಿ ೮ಗಂಟೆ ವೇಳೆ ಭಾರೀ ಸ್ಪೋಟದ ಶಬ್ದ ಕೇಳಿಬಂದಿತ್ತು. ಇದರಿಂದ ನಾಗರಿಕರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ನಾಯಿ ಗಾಯ ಗೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದೆ. ಹಲವು ಮಕ್ಕಳು ಆಟವಾಡುವ ಮೈದಾನದಲ್ಲಿ ಈ ಸ್ಫೋಟ ನಡೆದಿದೆ. ನಿನ್ನೆ ಸಂಜೆಯೂ ಇಲ್ಲಿ ಹಲವು ಮಕ್ಕಳು ಆಟವಾಡಿದ್ದರು. ಇದೇ ಹೊತ್ತಿನಲ್ಲಿ ಪಟಾಕಿ ಓರ್ವ ಬಾಲಕನಿಗೆ ಲಭಿಸಿದ್ದು, ಆದರೆ ಅದು ಇಷ್ಟು ಅಪಾಯಕಾ ರಿಯೆಂದು ತಿಳಿದಿರಲಿಲ್ಲವೆನ್ನಲಾಗಿದೆ. ಇದರಿಂದ ಅದನ್ನು ಅಲ್ಲೇ ಸಮೀಪ ಎಸೆದಿದ್ದರೆನ್ನಲಾಗಿದೆ. ಮಕ್ಕಳು ಆಟವಾಡುವ ಮೈದಾನದಲ್ಲಿ ಅಪಾಯಕಾರಿ ಸ್ಫೋಟಕವಸ್ತು ಇರಿಸಿದ ಘಟನೆ ಆತಂಕಕಾರಿ ಯೆಂದೂ ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ನಾಗರಿಕರು ನೀಡಿದ ದೂರಿನಂತೆ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಮೂರು ತಿಂಗಳ ಹಿಂದೆಯೂ ಇಲ್ಲಿ ಇದೇ ಸ್ಥಿತಿಯ ಘಟನೆ ನಡೆದಿತ್ತು. ಹಂದಿಯನ್ನು ಗುರಿಯಿರಿಸಿ ಇಂತಹ ಅಪಾಯಕಾರಿ ಪಟಾಕಿಯಿಂದ ಜನರಿಗೂ ಅಪಾಯವುಂಟಾಗುವ ಸಾಧ್ಯತೆ ಇದೆಯೆಂದು ನಾಗರಿಕರು ತಿಳಿಸಿದ್ದಾರೆ.