ಮೊಗ್ರಾಲ್ನಲ್ಲಿ ಎಟಿಎಂ ಕಳವಿಗೆ ಯತ್ನಿಸಿದ ಆರೋಪಿ ಬಂಧನ
ಕುಂಬಳೆ: ಮೊಗ್ರಾಲ್ ಪೇಟೆಯಲ್ಲಿರುವ ಸೌತ್ ಇಂಡ್ಯನ್ ಬ್ಯಾಂಕ್ನ ಎಟಿಎಂನಿಂದ ಕಳವಿಗೆತ್ನಿಸಿದ ಆರೋಪಿಯನ್ನು ಪೊಲೀಸರು ಅತೀ ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ.
ಮೊಗ್ರಾಲ್ ಕೊಪ್ಪಳದ ಮೂಸ ಫಹದ್ (22) ಎಂಬಾತನನ್ನು ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ನಿನ್ನೆ ಸಂಜೆ ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಎಟಿಎಂನಿಂದ ಹಣ ಕಳವಿಗೆ ಯತ್ನ ನಡೆದಿತ್ತು. ಎಟಿಎಂ ಯಂತ್ರವನ್ನು ಕೆಡವಿ ಹಾಗೂ ದೋಚಲು ಯತ್ನಿಸಿದ್ದು, ಈ ವೇಳೆ ಬ್ಯಾಂಕ್ನ ಸೈರನ್ ಮೊಳಗಿತ್ತು. ಆದ್ದರಿಂದ ಭಯಗೊಂಡ ಆರೋಪಿ ಯತ್ನ ಉಪೇಕ್ಷಿಸಿ ಅಲ್ಲಿಂದ ಪರಾರಿಯಾಗಿದ್ದನು. ಇದೇ ವೇಳೆ ಬ್ಯಾಂಕ್ನ ಸೈರನ್ ಶಬ್ದ ಕೇಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಅಲ್ಲಿಗೆ ತಲುಪಿ ಪರಿಶೀಲಿಸಿದಾಗ ಎಟಿಎಂನಿಂದ ಹಣ ಕಳವಿಗೆ ಯತ್ನಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ ಶ್ರೀಜೇಶ್ ನೇತೃತ್ವದ ಪೊಲೀಸರು ತಕ್ಷಣ ತಲುಪಿ ತನಿಖೆಗೆ ಚಾಲನೆ ನೀಡಿದ್ದರು. ಎಟಿಎಂ ಕೌಂಟರ್ನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಅದರಲ್ಲಿ ಕಳ್ಳನ ಚಿತ್ರ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆರೋಪಿಯ ಮನೆಯಲ್ಲಿ ಶೋಧ ನಡೆಸಿದಾಗ ಎಟಿಎಂ ಯಂತ್ರ ಮುರಿಯಲು ಬಳಸಿದ ಆಯುಧಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಳವು ಯತ್ನದಲ್ಲಿ ಬೇರೆ ಆರೋಪಿಗಳಿದ್ದಾರೆಯೇ ಎಂದು ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಸಾಮರ್ಥ್ಯ ಪರೀಕ್ಷಿಸಿದ ಆರೋಪಿ
ಕುಂಬಳೆ: ಮೊಗ್ರಾಲ್ನಲ್ಲಿ ಎಟಿಎಂ ಕಳವಿಗೆತ್ನಿಸಿ ಸಿಕ್ಕಿ ಬಿದ್ದ ಆರೋಪಿ ಮೂಸ ಫಹದ್ ಈ ಹಿಂದೆ ನಾಲ್ಕು ವರ್ಷ ಕಾಲ ಗಲ್ಫ್ನಲ್ಲಿದ್ದನು. ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದನು. ಬಳಿಕ ಎಟಿಎಂ ಕಳವಿಗೆ ಯೋಜನೆ ಹಾಕಿದ್ದಾನೆನ್ನಲಾಗಿದೆ. ಅಪರಾಧ ಕೃತ್ಯಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಮರ್ಥ ಕೇರಳ ಪೊಲೀಸರೇ ಅಥವಾ ದುಬಾ ಪೊಲೀಸರೇ ಎಂದು ಪರೀಕ್ಷಿಸಲು ಈ ಎಟಿಎಂ ಕಳವಿಗೆ ಮುಂದಾಗಿರುವುದಾಗಿ ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ. ಇದೇ ವೇಳೆ ‘ರೋಬಿನ್ವುಡ್’ ಎಂಬ ಸಿನಿಮಾದ ಕತೆಯೇ ಕಳವು ಯತ್ನಕ್ಕೆ ಪ್ರಚೋದಿಸಿದೆಯೆಂದೂ ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾರೆ.