ಮೊಯ್ದೀನ್ ಅರೀಫ್ ಕೊಲೆ ಪ್ರಕರಣ: ರಿಮಾಂಡ್ನಲ್ಲಿದ್ದ ಮೂವರು ಆರೋಪಿಗಳು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ
ಮಂಜೇಶ್ವರ: ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨)ರ ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್ ನಲ್ಲಿದ್ದ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸುವ ಅಂಗವಾಗಿ ಅವರನ್ನು ಮಂಜೇಶ್ವರ ಪೊಲೀಸರು ನ್ಯಾಯಾಲ ಯದ ಅನುಮತಿ ಮೇರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕಣ್ವತೀರ್ಥ ಇರ್ಶಾದ್ ಮಂ ಜಿಲ್ನ ಅಬ್ದುಲ್ ರಶೀದ್ (೨೮), ಕುಂಜತ್ತೂರು ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ನಿವಾಸಿಗಳಾದ ಶೌಕತ್ತಲಿ (೩೯), ಅಬೂಬಕರ್ ಸಿದ್ಧಿಕ್ (೩೩) ಎಂಬಿವರನ್ನು ಮಂಜೇಶ್ವರ ಸಿ.ಐ. ಕೆ. ರಾಜೀವ್ ಕುಮಾರ್ರ ಕಸ್ಟಡಿಗೆ ಬಿಟ್ಟು ಕೊಡಲಾಗಿದೆ. ಮೂರು ದಿನಗಳ ಕಾಲಕ್ಕೆ ಇವರನ್ನು ಪೊಲೀಸ್ ಕಸ್ಟಡಿಗೆ ಬಿಟ್ಟು ಕೊಟ್ಟಿದ್ದು, ೧೯ರಂದು ಮರಳಿ ನ್ಯಾಯಾ ಲಯದಲ್ಲಿ ಹಾಜರುಪಡಿಸಬೇಕಾಗಿದೆ. ಈ ಮೂರು ದಿನಗಳ ಕಾಲ ಆರೋಪಿಗಳನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುವ ಸಾಧ್ಯತೆ ಇದೆ.
ಮೊಯ್ದೀನ್ ಆರೀಫ್ಗೆ ತಂಡ ಹಲ್ಲೆಗೈದ ತೂಮಿನಾಡು ಪ್ರದೇಶಕ್ಕೆ ಆರೋಪಿಗಳನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಲಾಗುವುದೆಂದು ತಿಳಿದು ಬಂದಿದೆ. ಅಲ್ಲದೆ ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದೆ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆಗೊಳಪಡಿಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಇದೇ ವೇಳೆ ಈ ಕೊಲೆ ಪ್ರಕರಣದಲ್ಲಿ ಸೆರೆಗೀ ಡಾಗಲು ಬಾಕಿಯಿರುವ ಇತರ ಆರು ಮಂದಿ ಆರೋಪಿಗಳಿಗಾಗಿ ಇನ್ನೊಂದೆಡೆ ಶೋಧ ನಡೆಯುತ್ತಿದೆ. ಈ ಪೈಕಿ ಇಬ್ಬರು ಆರೋಪಿಗಳು ಗಲ್ಫ್ಗೆ ಪರಾರಿಯಾಗಿ ದ್ದಾರೆನ್ನಲಾಗಿದೆ. ಬಳಿಕ ನಾಲ್ಕು ಮಂದಿ ಪೈಕಿ ಇಬ್ಬರು ಗೋವಾ, ಮತ್ತಿಬ್ಬರು ಬೆಂ ಗಳೂರಿಗೆ ಪರಾರಿಯಾಗಿ ತಲೆಮರೆಸಿ ಕೊಂಡಿ ದ್ದಾರೆಂದು ತಿಳಿದು ಬಂದಿದೆ.
ಮಾರ್ಚ್ ೪ರಂದು ರಾತ್ರಿ ಗಾಂಜಾ ಮತ್ತಿನಲ್ಲಿ ಬೊಬ್ಬೆ ಹಾಕುತ್ತಿದ್ದಾನೆಂಬ ಆರೋಪದ ಮೇರೆಗೆ ಮೊಯ್ದೀನ್ ಆರೀಫ್ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರು ಕಸ್ಟಡಿಯಲ್ಲಿರಿಸಿ ಆರೋಪಿಗಳ ಪೈಕಿ ಅಬ್ದುಲ್ ರಶೀದ್ ಅಂದು ರಾತ್ರಿ ಪೊಲೀಸ್ ಠಾಣೆಗೆ ತಲುಪಿಸಿ ಮೊಯ್ದೀನ್ ಆರೀಫ್ ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದಿದ್ದಾನೆ. ಅನಂತರ ಅಬ್ದುಲ್ ರಶೀದ್ ಹಾಗೂ ಇತರ ಎಂಟು ಮಂದಿ ಸೇರಿ ತೂಮಿನಾಡು ಮೈದಾನಕ್ಕೆ ಕರೆದೊಯ್ದು ಹಲ್ಲೆಗೈದಿದ್ದರೆನ್ನಲಾಗಿದೆ. ಬಳಿಕ ಮೊಯ್ದೀನ್ ಆರೀಫ್ನನ್ನು ಆತನ ಮನೆಗೆ ತಲುಪಿಸಲಾಗಿತ್ತು. ಆದರೆ ಮರುದಿನ ಬೆಳಿಗ್ಗೆ ಮೊಯ್ದೀನ್ ಆರೀಫ್ ರಕ್ತವಾಂತಿ ಮಾಡಿದ್ದನು. ಇದರಿಂದ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾವಿನಲ್ಲಿ ಸಂಶಯವುಂಟಾದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಯುವಕನಿಗೆ ತಂಡ ಹಲ್ಲೆಗೈದ ವಿಷಯ ತಿಳಿದು ಬಂದಿದೆ.