ಮೋಸ್ಟ್ ವಾಂಟೆಡ್ ಲಷ್ಕರ್ ಎ ತೋಯ್ಬಾ ಮಾಜಿ ಕಮಾಂಡರ್ ಅಕ್ರಮ್ ವಾಜಿ ಗುಂಡಿಕ್ಕಿ ಹತ್ಯೆ
ನವದೆಹಲಿ: ಜಮ್ಮು-ಕಾಶ್ಮೀರ ಕಣಿವೆಯ ಹಲವೆಡೆಗಳಲ್ಲಿ ಪಾಕ್ ಉಗ್ರರನ್ನು ಭಾರತದೊಳಗೆ ನುಸುಳುವಂತೆ ಮಾಡಿ ಅವರ ಮೂಲಕ ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿಯನ್ನು ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಕ್ರಮ್ ಘಾಜಿ ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ೨೦೧೮-೨೦೨೦ರ ಅವಧಿಯಲ್ಲಿ ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ವೇಳೆ ಈತ ಉದ್ಯೋಗದ ಹೆಸರಲ್ಲಿ ಯುವಕರನ್ನು ತನ್ನತ್ತ ಸೆಳೆದು ಭಾರತದ ವಿರುದ್ಧ ವಿಧ್ವಂಸಕ ಕೃತ್ಯವೆಸಗಲು ಅವರಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ತರಬೇತಿ ನೀಡುತ್ತಿದ್ದ.
ಜಮ್ಮು-ಕಾಶ್ಮೀರದಲ್ಲಿ ೨೦೧೮ರ ಸುಂಜ್ವಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್‌ನನ್ನು ಕಳೆದ ಭಾನುವಾರವಷ್ಟೇ ಅಪರಿಚಿತರು ಅಪಹರಿಸಿದ್ದರು. ಬಳಿಕ ಪಾಕ್ ಅಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಆತ ಶಿರಚ್ಛೇದನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆ ಘಟನೆ ನಡೆದ ನಾಲ್ಕು ದಿನಗಳ ಬೆನ್ನಲ್ಲೇ ಇನ್ನೋರ್ವ ಉಗ್ರ ಅಕ್ರಮ್ ಘಾಜಿಯನ್ನು ಹತ್ಯೆಗೈಯ್ಯಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಅವರ ತವರಾದ ಪಾಕಿಸ್ತಾನದಲ್ಲೇ ಇತ್ತೀಚೆಗೆ ಒಬ್ಬೊಬ್ಬರಾಗಿ ಅಪರಿಚಿತರಿಂದ ಹತ್ಯೆಗೈಯ್ಯಲ್ಪಡುತ್ತಿದ್ದು, ಇದು ಪಾಕಿಸ್ತಾನದ ಉಗ್ರರಲ್ಲಿ ಭಾರೀ ನಡುಕ ಸೃಷ್ಟಿಸತೊಡಗಿದೆ.