ಯುವಕನನ್ನು ಅಪಹರಿಸಿ ಹಲ್ಲೆಗೈದು ನಗದು, ಫೋನ್ ಎಗರಿಸಿದ ಪ್ರಕರಣ: ನಾಲ್ವರ ಬಂಧನ

ಕಾಸರಗೋಡು: ಯುವಕನನ್ನು ಅಪಹರಿಸಿ ಕೊಂಡೊಯ್ದು ಹಲ್ಲೆನಡೆಸಿ ಆತನ ಹಣ ಮತ್ತು ಮೊಬೈಲ್ ಫೋನನ್ನು ಎಗರಿಸಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಚಂದೇರ ಪೊಲೀಸ್ ಠಾಣೆಯ ಎಸ್.ಐ. ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಚೆರುವತ್ತೂರು ಮಲ್ಲಾಕುದಿರಿನ ಎಂ. ಝಲ್ಫಿಕರ್ (೨೭), ಮುಹಮ್ಮದ್ ಶರೀಫ್ (೩೦), ಚೆರುವತ್ತೂರು ಪಿಲಾವಳಪ್ಪಿನ ಮೊಹಮ್ಮದ್ ಅನಸ್ಸ್ (೨೦) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಸಿದ್ದೀಕ್ (೨೩) ಬಂಧಿತರಾದ ಆರೋಪಿಗಳು.

ಪಿಲಿಕ್ಕೋಡ್ ಮಡಿವಯಲಿನ ವೆಂಬಿರಿಞ್ಞನ್ ನಿಧಿನ್ (೩೦) ಎಂಬ ವರನ್ನು ಮೊನ್ನೆ ರಾತ್ರಿ ಚೆರುವತ್ತೂರು ರೈಲು ನಿಲ್ದಾಣ ಪರಿಸರದಿಂದ ಆಟೋರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿ, ಮಾರಕಾಯುಧಗಳೊಂದಿಗೆ ಅವರ ಮೇಲೆ ಹಲ್ಲೆ ನಡೆಸಿ ಅವರ ಕೈಯಲ್ಲಿದ್ದ ೧೮೦೦ ರೂ. ನಗದು ಮತ್ತು ಮೊಬೈಲ್ ಫೋನನ್ನು ಎಗರಿಸಿ ಬಳಿಕ ರಸ್ತೆ ಬದಿಯಲ್ಲಿ ಅವರನ್ನು ಹೊರಕ್ಕೆ ದೂಡಿ ಹಾಕಿ ಆರೋಪಿಗಳು ತಪ್ಪಿಸಿಕೊಂಡಿದ್ದರು. ಆ ಬಗ್ಗೆ ನಿಧಿನ್ ನೀಡಿದ ದೂರಿನ ಪ್ರಕಾರ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಚೆರುವತ್ತೂರು ರೈಲು ನಿಲ್ದಾಣ ಪರಿಸರವನ್ನು ಕೇಂದ್ರೀಕರಿಸಿ ಗಾಂಜಾ ಮತ್ತು ಮದ್ಯ ಮಾರಾಟ ಮಾಡುವವರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಂತರ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page