ಯುವಕನ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ಲಿಂ ಲೀಗ್ ಕಾರ್ಯಕರ್ತರ ಖುಲಾಸೆ
ಕಾಸರಗೋಡು: ಸಹೋದರನ ಜೊತೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ತಡೆದು ನಿಲ್ಲಿಸಿ ಕೊಲೆಗೈದು, ಆತನ ಸಹೋದರನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಾಗಿರುವ ಮುಸ್ಲಿಂ ಲೀಗ್ ಕಾರ್ಯಕರ್ತರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೩) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಉದುಮ ಕಣ್ಣಂಕುಳಂನ ಬಾದ್‌ಶಾ ಮಂಜಿಲ್‌ನ ಶಾಹುಲ್ ಹಮೀದ್ (೨೭)ನನ್ನು ಕೊಲೆಗೈದ ಪ್ರಕರಣವಾಗಿದೆ ಇದು. ೨೦೧೫ ಮೇ ೧೨ರಂದು ಮುಂಜಾನೆ ೧.೧೫ಕ್ಕೆ ಪಳ್ಳಿಕ್ಕೆರೆ ಕಣ್ಣಂಕುಳ ಕುಣಿಯಂಬಾಡಿಯಲ್ಲಿ ಈ ಕೊಲೆ ಕೃತ್ಯ ನಡೆದಿತ್ತು. ಶಾಹುಲ್ ಹಮೀದ್ ತನ್ನ ಸಹೋದರ ಇಬ್ರಾಹಿಂ ಬಾದ್‌ಶಾನ ಜೊತೆ ಮೋಟಾರು ಬೈಕ್‌ನಲ್ಲಿ ಹೋಗುತ್ತಿದ್ದ ದಾರಿ ಮಧ್ಯೆ ಅಕ್ರಮಿಗಳು ಅವರನ್ನು ತಡೆದು ನಿಲ್ಲಿಸಿ ಅವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ಆ ವೇಳೆ ತಲೆಗೆ ಗಂಭೀರ ಗಾಯಗೊಂಡಿದ್ದ ಶಾಹುಲ್ ಹಮೀದ್ ಸಾವನ್ನಪ್ಪಿ, ಆತನ ಸಹೋದರ ಇಬ್ರಾಹಿಂ, ಬಾದ್‌ಶಾ ಗಂಭೀರ ಗಾಯಗೊಂಡಿದ್ದರು. ಇದಕ್ಕೆ ಸಂಬಂಧಿಸಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಉದುಮ ಪಾಕ್ಯಾರದ ಪಿ.ಎಚ್. ಮುಹಮ್ಮದ್ ರಫೀಸ್, ಮುಹಮ್ಮದ್ ಇರ್ಷಾದ್, ಸಿ.ಎಚ್. ಸಾಹಿದ್, ಕೆ. ಶಿಹಾಬ್, ಸಫ್ರಾಸ್, ಮೊಹಮ್ಮದ್ ಆಶಿಫ್, ಪಿ. ಮೊಹಮ್ಮದ್ ಶಾಬೀರ್ ಮತ್ತು ಏರೋಳ್‌ನ ಫಾರೂಕ್ ಎಂಬವರ ವಿರುದ್ಧ ಬೇಕಲ ಪೊಲೀಸರು ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರ ವಿಚಾರಣೆಯಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತುಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.