ಯುವತಿ ಮತ್ತು ಮಗಳ ಸಾವು: ಸ್ನೇಹಿತ ಅಧ್ಯಾಪಕ ಆತ್ಮಹತ್ಯಾ ಪ್ರೇರಣೆ ಪ್ರಕರಣದಲ್ಲಿ ಬಂಧನ
ಕಾಸರಗೋಡು: ಯುವತಿ ಮತ್ತು ಆಕೆಯ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸ್ನೇಹಿತನಾದ ಅಧ್ಯಾಪಕನ ವಿರುದ್ಧ ಆತ್ಮಹತ್ಯಾ ಪ್ರೇರಣೆ ಮತ್ತು ಪುರಾವೆಗಳ ನಾಶಗೊಳಿಸಿದ ಆರೋ ಪದಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಮೇಲ್ಪರಂಬಕ್ಕೆ ಸಮೀಪದ ಬಾರ ಎರೋಳ್ ಜುಮಾ ಮಸೀದಿ ಬಳಿಯ ನಿವಾಸಿ ಹಾಗೂ ಖಾಸಗಿ ಶಾಲೆಯೊಂದರ ಅಧ್ಯಾಪಕ ಸಫ್ವಾನ್ ಆದೂರು (೨೯) ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸ್ ಇನ್ಸ್ಪೆಕ್ಟರ್ ಟಿ. ಉತ್ತಮ್ದಾಸ್ ಬಂಧಿಸಿದ್ದಾರೆ. ಆರೋಪಿಯನ್ನು ನಂತರ ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ.
ಕಳೆದ ಸೆಪ್ಟಂಬರ್ ೧೫ರಂದು ಕಳನಾಡು ಅರಮಂಗಾನ ಹದ್ದಾದ್ ನಗರದ ನಿವಾಸಿ ಹಾಗೂ ಗಲ್ಫ್ ಉದ್ಯೋಗಿಯಾಗಿರುವ ತಾಜುದ್ದೀನ್ ಎಂಬವರ ಪತ್ನಿ ಎಂ.ಎ. ರುಬೀನ (೩೨) ಮತ್ತು ಆಕೆಯ ಪುತ್ರಿ ಕೆ. ಹನಾನಾ ಮರಿಯಾಂ (೫) ಎಂಬವರು ಮನೆ ಪಕ್ಕದ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದರ ಹಿಂದಿನದಿನದಂದು ಅವರಿಬ್ಬರು ನಾಪತ್ತೆಯಾಗಿದ್ದರು. ಮನೆಯವರು ಅವರಿಗಾಗಿ ಶೋಧ ನಡೆಸಿದಾಗ ಮರುದಿನ ಬೆಳಿಗ್ಗೆ ಬಾವಿಯಲ್ಲಿ ಅವರ ಮೃತದೇಹಗಳು ಪತ್ತೆಯಾಗಿದ್ದವು.
ರುಬೀನ ಮತ್ತು ಹನಾನಾರ ಸಾವಿನ ಬಗ್ಗೆ ರುಬೀನಳ ತಂದೆ ಅಬ್ದುಲ್ ರಹ್ಮಾನ್ ಬಳಿಕ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಅವರಿಬ್ಬರ ಸಾವಿಗೆ ಸಂಬಂಧಿಸಿ ಸಫ್ವಾನ್ ಆದೂರಿನ ವಿರುದ್ಧ ಪೊಲೀಸರು ಆತ್ಮಹತ್ಯಾ ಪ್ರೇರಣೆ ಮತ್ತು ಪುರಾವೆಗಳ ನಾಶ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಮೃತ ರುಬೀನ ಕಳೆದ ೯ ವರ್ಷಗಳಿಂದ ಸಾಮಾಜಿಕ ಜಾಲತಾ ಣದ ಮೂಲಕ ಸಫ್ವಾನ್ನೊಂದಿಗೆ ಪರಿಚಯಗೊಂಡಿದ್ದಳು. ಆ ವೇಳೆ ಆತ ಬೇರೊಂದು ಯುವತಿಯನ್ನು ಮದುವೆಯಾಗುವ ತೀರ್ಮಾನ ಕೈಗೊಂಡಿದ್ದನು. ಆ ವಿಷಯದಲ್ಲಿ ಆತ ಮತ್ತು ರುಬೀನಾಳ ಮಧ್ಯೆ ಪರಸ್ಪರ ವಾಗ್ವಾದ ನಡೆದಿತ್ತೆಂದೂ, ಅದುವೇ ರುಬೀನಾಳ ಆತ್ಮಹತ್ಯೆಗೆ ಪ್ರೇರಣೆ ನೀಡಲು ಕಾರಣವಾಗಿದೆಯೆಂದು ಪೊಲೀಸರಿಗೆ ಆಕೆಯ ಸಂಬಂಧಿಕರು ಹೇಳಿಕೆ ನೀಡಿದ್ದರು. ಅದರಂತೆ ಪೊಲೀಸರು ರುಬೀನಾ ಮತ್ತು ಆರೋಪಿಯ ಮೊಬೈಲ್ ಫೋನ್ ಗಳ ಕರೆಗಳನ್ನು ಪರಿಶೀಲಿಸಿದ್ದರು. ಮಾತ್ರವಲ್ಲ ಮೊಬೈಲ್ ಫೋನ್ ನಲ್ಲಿ ನಡೆಸಲಾದ ಚಾಟಿಂಗ್ನ್ನು ನಾಶಗೊಳಿಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿ ಆತ್ಮಹತ್ಯೆ ಪ್ರೇರಣೆ ಮಾತ್ರವಲ್ಲ ಪುರಾವೆಗಳನ್ನು ನಾಶಗೊಳಿಸಿದ ಸೆಕ್ಷನ್ ಪ್ರಕಾರವೂ ಪೊಲೀಸರು ಕೊನೆಗೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.