ರಶೀದ್ ಕೊಲೆ ಪ್ರಕರಣ: ಆರೋಪಿಯನ್ನು ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ನ್ಯಾಯಾಲಯಕ್ಕೆ
ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಶಾಂತಿಪಳ್ಳ ನಿವಾಸಿ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೯)ನನ್ನು ಕೊಲೆಗೈದ ಪ್ರಕರಣದ ಆರೋಪಿ ಈ ಹಿಂದೆ ಪೆರುವಾಡ್ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ (೩೨)ನನ್ನು ಕಸ್ಟಡಿಗೆ ಪಡೆಯಲು ಕುಂಬಳೆ ಇನ್ಸ್ಪೆಕ್ಟರ್ ಇ. ಅನೂಪ್ ಕುಮಾರ್ ನಾಳೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಕೊಲೆ ಕೃತ್ಯದಲ್ಲಿ ಅಥವಾ ಸಂಚು ಹೂಡಲು ಬೇರೆ ಯಾರಾದರೂ ಭಾಗಿಯಾ ಗಿದ್ದಾರೆಯೇ ಎಂದು ತಿಳಿಯಲು ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲಾಗುವುದು. ಈ ತಿಂಗಳ ೧ರಂದು ರಾತ್ರಿ ಸಮೂಸ ರಶೀದ್ ಕುಂಟಂಗೇರಡ್ಕ ಐಎಚ್ಆರ್ಡಿ ಕಾಲೇಜು ಸಮೀಪದ ಮೈದಾನದಲ್ಲಿ ಕೊಲೆಗೀಡಾಗಿದ್ದನು. ಮರುದಿನ ಬೆಳಿಗ್ಗೆ ಮೈದಾನ ಸಮೀಪ ಪೊದೆಗಳೆಡೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಹಬೀಬ್ ಈ ಕೊಲೆ ನಡೆಸಿದ್ದಾನೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಮಧೂರು ಪಟ್ಲದ ಶಾನು ಯಾನೆ ಶಾನವಾಸ್ನನ್ನು ಕೊಲೆಗೈದು ಮೃತದೇಹವನ್ನು ಕಾಸರಗೋಡು ನಾಯಕ್ಸ್ ರಸ್ತೆ ಸಮೀಪದ ಪಾಳು ಬಾವಿಗೆ ಎಸೆದ ಪ್ರಕರಣದಲ್ಲಿ ಸಮೂಸ ರಶೀದ್ ಪ್ರಥಮ ಆರೋಪಿಯಾಗಿದ್ದಾನೆ. ಅಭಿಲಾಷ್ ಯಾನೆ ಹಬೀಬ್ ಕೊಲೆಗೀಡಾದ ಶಾನುವಿನ ಆಪ್ತ ಸ್ನೇಹಿತನಾಗಿದ್ದಾನೆ.