ರಸ್ತೆ ಬದಿ ನಿದ್ರಿಸುತ್ತಿದ್ದವರ ಮೇಲೆ ಸಂಚರಿಸಿದ ಲಾರಿ: ಇಬ್ಬರು ಮಕ್ಕಳ ಸಹಿತ ಐದು ಮಂದಿ ದಾರುಣ ಮೃತ್ಯು
ತೃಶೂರು: ಮರ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಸಂಚರಿಸಿದ ಪರಿಣಾಮ ರಸ್ತೆ ಬದಿ ನಿದ್ರಿಸುತ್ತಿದ್ದ ಇಬ್ಬರು ಮಕ್ಕಳು ಸಹಿತ ಐದು ಮಂದಿ ಮೃತಪಟ್ಟ ದಾರುಣ ಘಟನೆ ತೃಶೂರಿನ ನಾಟಿಗ ಎಂಬಲ್ಲಿ ಸಂಭವಿಸಿದೆ.
ನಾಟಿಗ ಜೆ.ಕೆ. ಥಿಯೇಟರ್ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಯಲ್ಲಿ ಇಂದು ಮುಂಜಾನೆ ೪ ಗಂಟೆ ವೇಳೆ ಈ ಅಪಘಾತವುಂಟಾಗಿದೆ.
ಮೃತಪಟ್ಟವರಲ್ಲಿ ಕಾಳಿಯಪ್ಪನ್ (50), ನಾಗಮ್ಮ (36), ಬಂಗಾಳಿ (20), ಜೀವನ್ (4) ಹಾಗೂ ಇನ್ನೊಂದು ಮಗು ಒಳಗೊಂಡಿದೆ. ಇವರು ಗೋವಿಂದಾಪುರಂ ಚೆಮ್ಮಣಂ ತೋಡ್ ನಿವಾಸಿಗಳಾಗಿದ್ದಾರೆಂದು ಹೇಳಲಾಗುತ್ತಿದೆ. ಐದು ಮಂದಿ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಅವರನ್ನು ತೃಶೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಟಿಗ ಮೇಲ್ಸೇತುವೆ ಕಾಮಗಾರಿ ನಡೆಯು ತ್ತಿರುವುದರಿಂದ ಬ್ಯಾರಿಕೇಡ್ ಸ್ಥಾಪಿಸಲಾಗಿತ್ತು. ಕಣ್ಣೂರಿನಿಂದ ಕೊಚ್ಚಿ ಭಾಗಕ್ಕೆ ಮರ ಸಾಗಿಸುತ್ತಿದ್ದ ಲಾರಿ ಬ್ಯಾರಿಕೇಡ್ ಕೆಡವಿ ಸಾಗಿ ನಿದ್ರಿಸುತ್ತಿದ್ದವರ ಮೇಲೆ ಸಂಚರಿಸಿ ಅಪಘಾತವುಂಟಾಗಿದೆಯೆನ್ನಲಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೂಚನಾ ಫಲಕಗಳಿದ್ದರೂ ಅದನ್ನು ಲೆಕ್ಕಿಸದೆ ಲಾರಿ ಚಲಾಯಿಸಿರುವುದಾಗಿ ಹೇಳಲಾಗುತ್ತಿದೆ.
ಇದೇ ವೇಳೆ ಮದ್ಯದ ಅಮಲಿನಲ್ಲಿದ್ದ ಕ್ಲೀನರ್ ಲಾರಿ ಚಲಾಯಿಸಿರುವುದಾಗಿ ಪೊಲೀಸರು ತಿಳಿಸುತ್ತಿದ್ದಾರೆ.
ಈತನಿಗೆ ಲೈಸನ್ಸ್ ಕೂಡಾ ಇಲ್ಲವೆನ್ನಲಾಗಿದೆ. ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಜೋಸ್, ಕ್ಲೀನರ್ ಕಣ್ಣೂರು ಅಲಕ್ಕೋಡ್ ನಿವಾಸಿ ಅಲೆಕ್ಸ್ (33) ಎಂಬಿವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಮನಪೂರ್ವವಲ್ಲದ ನರಹತ್ಯಾ ಕೇಸು ದಾಖಲಿಸಲಾಗಿದೆ.