ರಾಜ್ಯದಲ್ಲಿ ನಿರುದ್ಯೋಗ ವೇತನ ಪಡೆಯುವವರು ಈಗ ಕೇವಲ ೨೦೮೦ ಮಂದಿ ಮಾತ್ರ

ಕಾಸರಗೋಡು: ಒಂದು ಕಾಲದಲ್ಲಿ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗ ವೇತನ ಪಡೆಯುತ್ತಿದ್ದ ಜಾಗದಲ್ಲಿ ಈಗ ಅದಕ್ಕೆ ಅರ್ಹರಾಗಿರುವುದು ಕೇವಲ ೨೦೮೦ ಮಂದಿ ಮಾತ್ರ.

ಅಂದರೆ ರಾಜ್ಯದಲ್ಲಿ ನಿರುದ್ಯೋಗ ಅಷ್ಟರ ಮಟ್ಟಿಗೆ ಇಳಿದಿದೆ ಎಂಬುದು ಇದರ ಅರ್ಥವಲ್ಲ. ನಿರುದ್ಯೋಗ ವೇತನವಾಗಿ ಕಳೆದ ೨೫ ವರ್ಷಗಳಿಂದ ತಿಂಗಳಿಗೆ ತಲಾ ೧೨೦ ರೂ. ಮಾತ್ರವೇ ವಿತರಿಸಲಾಗುತ್ತಿದೆ. ಇಷ್ಟು ವರ್ಷಗಳಾದರೂ ಅದನ್ನು ಇನ್ನೂ ಹೆಚ್ಚಿಸದೆ ಅದೇ ರೀತಿಯ ವಿತರಣೆ ಈಗಲೂ ಮುಂದುವರಿಯುತ್ತಿದೆ. ನಿರುದ್ಯೋಗ ವೇತನ ಹೆಚ್ಚಿಸಬೇಕೆಂಬ ವರ್ಷಗಳ ಬೇಡಿಕೆಯನ್ನು ಸರಕಾರ ಇನ್ನೂ ಪರಿಗಣಿಸಿಲ್ಲ.

ವಾರ್ಷಿಕ ಕುಟುಂಬ ಆದಾಯ ೧೨೦೦೦ ರೂ.ಗಿಂತ ಕೆಳಗೆ ಹಾಗೂ ೧೦೦ ರೂ.ತನಕ ವೈಯಕ್ತಿಕ ಆದಾಯ ಹೊಂದಿರುವವರಿಗೆ ಮಾತ್ರವಾಗಿ ನಿರುದ್ಯೋಗ ವೇತನವನ್ನು ಸೀಮಿತಗೊಳಿಸಲಾಗಿದೆ.

ನಿರುದ್ಯೋಗ ವೇತನ ಲಭಿಸಲು ಜನರಲ್ ವಿಭಾಗದವರು ಕನಿಷ್ಠ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ ಮೂರು ವರ್ಷಗಳ ಬಳಿಕವಷ್ಟೇ ನಿರುದ್ಯೋಗ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಪರಿಶಿಷ್ಟ ವಿಭಾಗದವರು ಮತ್ತು ವಿಕಲಚೇತನರು ನಿರುದ್ಯೋಗ ವೇತನ ಲಭಿಸಲು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಬೇಕೆಂದೇನಿಲ್ಲ.

ಸ್ಥಳೀಯಾಡಳಿತ ಸಂಸ್ಥೆಗಳು ಅಂಗೀಕರಿಸಿ ನೀಡುವ ಪಟ್ಟಿಯಲ್ಲಿ ಹೆಸರು ಒಳಗೊಂಡವರಿಗೆ ಆದಾಯ ಸರ್ಟಿಫಿಕೆಟನ್ನು ಹಾಜರುಪಡಿಸದಿದ್ದರೂ, ಈ ಹಿಂದೆ ವೇತನ ನೀಡಲಾಗುತ್ತಿತ್ತು. ಆದರೆ ನಿರುದ್ಯೋಗ ವೇತನ ಲಭಿಸಲು ಆದಾಯ ಸರ್ಟಿಫಿಕೆಟ್ ಹಾಜರುಪಡಿಸಬೇಕೆಂಬುವುದನ್ನು ಈಗ ಕಡ್ಡಾಯಗೊಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಇಂದು ನಿರುದ್ಯೋಗವೇತನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಕುಸಿಯುವಂತೆ ಮಾಡಿದೆ.

ಅರ್ಜಿದಾರರ ಕುಟುಂಬ ಆದಾಯ ಮಿತಿಯನ್ನು ಹೆಚ್ಚಿಸಬೇಕು ಮತ್ತು ನಿರುದ್ಯೋಗ ವೇತನವನ್ನು ೫೦೦ ರೂ.ಗೇರಿಸುವಂತೆ ಉದ್ಯೋಗ ವಿನಿಮಯ ಕೇಂದ್ರದ ನಿರ್ದೇಶಕರು ಶಿಫಾರಸು ಸಲ್ಲಿಸಿದರೂ, ಅದನ್ನು ಸರಕಾರ ಈ ತನಕ ಪರಿಗಣಿಸಿಲ್ಲ. ತಿಂಗಳಿಗೆ ಕೇವಲ ೧೨೦ ರೂ. ನಿರುದ್ಯೋಗ ವೇತನ, ಅದು ಲಭಿಸಲಿರುವ ಹಲವು ಮಾನದಂಡಗಳು ಮತ್ತು ಇತರ ಕಡ್ಡಾಯಕ್ರಮಗಳಿಂದಾಗಿ ನಿರುದಗಕ್ಕಾಗಿ ಅರ್ಜಿ ಸಲ್ಲಿಸಲು ಹೆಚ್ಚಿನವರು ತಯಾರಾಗುತ್ತಿಲ್ಲ. ಇದುವೇ ರಾಜ್ಯದಲ್ಲಿ ನಿರುದ್ಯೋಗ ವೇತನ ಪಡೆಯುವವರ ಸಂಖ್ಯೆ ಈಗ ಇಳಿಯಲು ಪ್ರಧಾನ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page