ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ನಾಳೆಯಿಂದ
ತಿರುವನಂತಪುರ: ಈ ವರ್ಷದ ಮೊದಲ ವಿಧಾನಸಭಾ ಅಧಿವೇಶನ ನಾಳೆ ಆರಂಭಗೊಳ್ಳಲಿದ್ದು, ಮಾರ್ಚ್ ೨೭ರ ತನಕ ಮುಂದುವರಿಯಲಿದೆ.
೨೦೨೪-೨೫ನೇ ಆರ್ಥಿಕ ವರ್ಷದ ರಾಜ್ಯ ಮುಂಗಡ ಪತ್ರ (ಬಜೆಟ್)ನ್ನು ಫೆಬ್ರವರಿ ೨೫ರಂದು ಕೆ.ಎಸ್. ಬಾಲಗೋಪಾಲನ್ ವಿಧಾನಸಭೆಯಲ್ಲಿ ಮಂಡಿಸುವರು. ಆಧ್ಯಾದೇಶಗಳ ಪರ್ಯಾಯವಾಗಿ ಮೂರು ಸೇರಿದಂತೆ ಒಟ್ಟು ಎಂಟು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗುವುದು. ನಾಳೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ರ ಭಾಷಣದೊಂದಿಗೆ ಬಜೆಟ್ ಅಧಿವೇಶನಕ್ಕೆ ಚಾಲನೆ ದೊರಕಲಿದೆ. ಜನವರಿ ೨೯ರಿಂದ ೩೧ರ ತನಕ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಬಳಿಕ ಫೆ. ೫ರಂದು ಬಜೆಟ್ ಮಂಡಿಸಲಾಗುವುದು. ನಂತರ ಫೆ. ೧೧ರ ತನಕ ಅಧಿವೇಶನಕ್ಕೆ ವಿರಾಮ ನೀಡಲಾಗುವುದು. ಫೆ. ೧೨ರಿಂದ ೧೪ರ ತನಕ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ. ೧೫ರಿಂದ ೨೫ರ ತನಕ ವಿಷಯ ಸಮಿತಿ ಸಭೆ (ಸಬ್ಜೆಕ್ಟ್ ಕಮಿಟಿ) ಸಭೆ ನಡೆಯಲಿದೆ. ಫೆ. ೨೬ರಿಂದ ಮಾರ್ಚ್ ೨೦ರ ತನಕ ಧನ ವಿನಿಯೋಗ ಚರ್ಚೆಗಳು ನಡೆಯಲಿದೆ.
೨೦೨೪ರ ಕೇರಳ ರಾಜ್ಯ ಸರಕು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, ೨೦೨೪ರ ಕೇರಳ ಮುನಿಸಿಪಾಲಿಟಿ (ತಿದ್ದುಪಡಿ) ಮಸೂದೆ ಮತ್ತು ೨೦೨೪ರ ಕೇರಳ ಪಂಚಾಯತ್ ರಾಜ್ಯ (ತಿದ್ದುಪಡಿ) ಮಸೂದೆಯನ್ನು ಸದನದ ಅಂಗೀಕಾರಕ್ಕಾಗಿ ಮಂಡಿಸಲಾಗುವುದು.
ಇದರ ಹೊರತಾಗಿ ೨೦೨೩ರ ಕೇರಳ ವೆಟರ್ನರಿ, ಪ್ರಾಣಿಶಾಸ್ತ್ರ, ವಿಶ್ವವಿ ದ್ಯಾಲಯ (ತಿದ್ದುಪಡಿ) ಮಸೂದೆ, ೨೦೨೩ರ ಕೇರಳ ಜಾನುವಾರು (ತಿದ್ದುಪಡಿ) ಮಸೂದೆ, ೨೦೨೩ರ ಕ್ರಿಮಿನಲ್ ಕ್ರಮ ಕಾನೂನು ಸಂಹಿತೆ (ಕೇರಳ ಎರಡನೇ ತಿದ್ದುಪಡಿ) ಮಸೂದೆ, ೨೦೨೩ರ ಕೇರಳ ಸಾರ್ವಜನಿಕ ಮಾರ್ಗಸೂಚಿ ಮಸೂದೆ ಮತ್ತು ೨೦೨೪ರ ಮಲಬಾರ್ ಹಿಂದೂ ಮತ ಧರ್ಮ ಸ್ಥಾಪನೆಗಳು ಮತ್ತು ಎಂಡೋಮೆಂಟ್ ಮಸೂದೆಗಳನ್ನು ಅನುಮೋದನೆಗಾಗಿ ವಿಧಾನಸಭೆಯಲ್ಲಿ ಮಂಡಿಸಲಾಗುವುದು.