ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಾಮಗ್ರಿ ಕಳವು: ಇಬ್ಬರ ಸೆರೆ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗಾಗಿ ತಂದಿಳಿಸಲಾಗಿದ್ದ ಸಾಮಗ್ರಿಗಳನ್ನು ಕಳವುಗೈದ ತಂಡದ ಇಬ್ಬರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ನಿವಾಸಿಗಳಾದ ಅಬೇದ್ ಅಲಿ, (೩೯) ಮತ್ತು ಅನ್ವರ್ ಹುಸೈನ್ (೪೦) ಬಂಧಿತರಾದ ಆರೋಪಿಗಳಾಗಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಎಸ್.ಐ. ಕೆ.ಪಿ. ಸತೀಶ್ರ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಹೊಸದುರ್ಗ ಚಮ್ಮಟ್ಟಂಬೈಲ್ ಟ್ರೆಂಡಿಂಗ್ ಗ್ರಾಂಡ್ ಬಳಿ ಇರಿಸಲಾಗಿದ್ದ ನಿರ್ಮಾಣ ಸಾಮಗ್ರಿಗಳನ್ನು ಆರೋಪಿಗಳು ಕದ್ದು ಸಾಗಿಸಿರುವುದಾಗಿಯೂ, ಅದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಬ್ಬಿಣದ ಕೊಳವೆಗಳು, ನಿರ್ಮಾಣ ಉಪಕರಣಗಳು, ಇತ್ಯಾದಿ ಸಾಮಗ್ರಿಗಳು ಆರೋಪಿಗಳು ಕದ್ದು ಸಾಗಿಸಿದ ಮಾಲುಗಳಲ್ಲಿ ಒಳಗೊಂಡಿವೆ.
ಚೆಂಗಳದಿಂದ ಆರಂಭಗೊಂಡು ನೀಲೇಶ್ವರ ತನಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಂದಿಳಿಸಲಾಗುವ ನಿರ್ಮಾಣ ಸಾಮಗ್ರಿಗಳು ನಾಪತ್ತೆಯಾಗುವುದು ಇತ್ತೀಚೆಗೆ ಸಾಮಾನ್ಯವಾಗತೊಡಗಿದೆ. ಸೈಕಲ್ನ್ನು ಅಳವಡಿಸಿದ ದೂಡುಗಾಡಿಯಲ್ಲಿ ಸಾಮಗ್ರಿಗಳನ್ನು ಕದ್ದು ಸಾಗಿಸಲಾಗುತ್ತಿದೆ. ಮುಂಜಾನೆ ವೇಳೆಗೆ ಕಳವು ನಡೆಸಲಾಗುತ್ತಿದೆ. ಹೀಗೆ ಕದ್ದು ಸಾಗಿಸಲಾಗುವ ಸಾಮಗ್ರಿಗಳನ್ನು ನಿರ್ಜನ ಪ್ರದೇಶದ ಪೊದೆಗಳಲ್ಲಿ ಬಚ್ಚಿಟ್ಟು ನಂತರ ಅವುಗಳನ್ನು ಅಲ್ಲಿಂದ ಲಾರಿಗಳಲ್ಲಿ ಸಾಗಿಸುವುದು ಈ ಕಳವು ದಂಧೆಯವರ ರೀತಿಯಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.