ರೋಗಿಯ ಪ್ರಜ್ಞೆ ತಪ್ಪಿಸಲು ೨೦೦೦ ರೂ. ಲಂಚ: ಡಾಕ್ಟರ್‌ಗೆ ಜೈಲು
ಕಾಸರಗೋಡು: ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಪಡಿಸಲು ೨೦೦೦ ರೂಪಾಯಿ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್‌ನ ಸೆರೆಗೀಡಾದ ಡಾಕ್ಟರ್‌ಗೆ ರಿಮಾಂಡ್ ವಿಧಿಸಲಾಗಿದೆ. ಜನರಲ್ ಆಸ್ಪತ್ರೆಯ ಅನಸ್ತೇಶಿಯ ವಿಭಾಗದ ಡಾಕ್ಟರ್ ಕೆ.ಎಂ. ವೆಂಕಟಗಿರಿಗೆ ರಿಮಾಂಡ್ ವಿಧಿಸಲಾಗಿದೆ. ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ಮೆಜಿಸ್ಟ್ರೇಟ್ ರಜೆಯಲ್ಲಿರುವುದರಿಂದ ಕಲ್ಲಿಕೋಟೆ ಮೆಜಿಸ್ಟ್ರೇಟರ ವಸತಿಯಲ್ಲಿ ಹಾಜರುಪಡಿಸಿದಾಗ ರಿಮಾಂಡ್ ವಿಧಿಸಲಾಗಿದೆ.
ನಿನ್ನೆ ಸಂಜೆ ನುಳ್ಳಿಪ್ಪಾಡಿಯ ಮನೆಯಲ್ಲಿ ಲಂಚ ಪಡೆಯುತ್ತಿದ್ದಾಗ ವೈದ್ಯರನ್ನು ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ ನಾಯರ್‌ರ ನೇತೃತ್ವದ ತಂಡ ಸೆರೆಹಿಡಿದಿದೆ. ಮಧೂರು ಪಟ್ಲ ನಿವಾಸಿಯೊಬ್ಬರು ಹರ್ನಿಯ ಚಿಕಿತ್ಸೆಗಾಗಿ ಕಳೆದ ಜೂನ್ ೨೧ರಂದು ಜನರಲ್ ಆಸ್ಪತ್ರೆಗೆ ತಲುಪಿದ್ದರು. ಅವರನ್ನು ತಪಾಸಣೆ ನಡೆಸಿದ ಸರ್ಜನ್ ಅದೇ ದಿನ ಚಿಕಿತ್ಸೆ ನಡೆಸುವಂತೆ ತಿಳಿಸಿದ್ದರು. ಅದಕ್ಕಾಗಿ ಅನಸ್ತೇಶಿಯ ತಜ್ಞ ಡಾ| ವೆಂಕಟಗಿರಿಯನ್ನು ಕಾಣಬೇಕೆಂದು ತಿಳಿಸಿದ್ದರು. ಇದರಂತೆ ಐದು ದಿನಗಳ ನಂತರ ವೈದ್ಯರನ್ನು ಭೇಟಿಯಾದಾಗ ಡಿಸೆಂಬರ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ದಿನಾಂಕ ನೀಡಿದ್ದಾರೆ. ಆದರೆ ಅಸಹನೀಯ ನೋವು ಇದೆಯೆಂದೂ ಶಸ್ತ್ರಚಿಕಿತ್ಸೆ ಅದಕ್ಕಿಂತ ಮೊದಲು ನಡೆಸಬಹುದೇ ಎಂದು ರೋಗಿ ವಿನಂತಿಸಿದ್ದಾರೆ. ಆದರೆ ಅದಕ್ಕಿಂತ ಮೊದಲು ದಿನಾಂಕ ನಿಗದಿಪಡಿಸಲು ವೈದ್ಯ ೨೦೦೦ ರೂಪಾಯಿ ಲಂಚ ಕೇಳಿರುವುದಾಗಿ ದೂರಲಾಗಿದೆ. ಈ ವಿಷಯವನ್ನು ರೋಗಿ ವಿಜಿಲೆನ್ಸ್ ಎಸ್ಪಿಗೆ ತಿಳಿಸಿದ್ದಾರೆ. ಅವರ ನಿರ್ದೇಶದಂತೆ ದೂರುಗಾರ ವಿಜಿಲೆನ್ಸ್ ನೀಡಿದ ೨೦೦೦ ರೂಪಾಯಿ ಸಹಿತ ನಿನ್ನೆ ಸಂಜೆ ವೈದ್ಯರನ್ನು ಭೇಟಿಯಾಗಲು ತಲುಪಿದಾಗ ಕೈಯ್ಯಾರೆ ಸೆರೆಹಿಡಿಯಲಾಗಿದೆ.
೨೦೧೯ರಲ್ಲೂ ಡಾ| ವೆಂಕಟಗಿರಿ ವಿರುದ್ಧ ಲಂಚ ಆರೋಪವುಂಟಾಗಿದ್ದು, ಅದರಂತೆ ಇಲಾಖೆ ಮಟ್ಟದ ಕ್ರಮ ಕೈಗೊಂಡು ತನಿಖೆ ನಡೆಸಲಾಗಿತ್ತು. ವಿಜಿಲೆನ್ಸ್ ತಂಡದಲ್ಲಿ ಇನ್‌ಸ್ಪೆಕ್ಟರ್ ಸುನು ಮೋನ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಕೆ. ರಾಧಾಕೃಷ್ಣನ್, ಅಸಿ. ಸಬ್ ಇನ್‌ಸ್ಪೆಕ್ಟರ್‌ಗಳಾದ ವಿ.ಟಿ. ಸುಭಾಶ್ಚಂದ್ರನ್, ಪ್ರಿಯ ಕೆ. ನಾಯರ್, ಕೆ.ವಿ. ಶ್ರೀನಿವಾಸನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಪಿ.ಕೆ. ರಂಜಿತ್ ಕುಮಾರ್, ವಿ. ರಾಜೀವನ್, ಪ್ರದೀಪ್, ಕೆ.ಬಿ. ಬಿಜು, ಶೀಬ, ಪ್ರಮೋದ್ ಕುಮಾರ್, ಪ್ರದೀಶ್ ಕುಮಾರ್, ಕೃಷ್ಣನ್, ಎ.ವಿ. ರತೀಶ್, ಜಿಲ್ಲಾ ಪ್ಲಾನಿಂಗ್ ಆಫೀಸರ್ ರಿಜು ಮ್ಯಾಥ್ಯು, ಡಯರಿ ಡೆವಲಪ್‌ಮೆಂಟ್ ಸೀನಿಯರ್ ಸುಪರಿಂಟೆಂಡೆಂಟ್ ಬಿ. ಸುರೇಶ್ ಕುಮಾರ್ ಎಂಬಿವರಿದ್ದರು.