ವಯನಾಡು: ಸಾವಿಗೀಡಾದ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಬೆಂಡೋಲೆ, ಕೂದಲು, ಬಟ್ಟೆ ತುಂಡುಗಳು ಪತ್ತೆ
ವಯನಾಡು: ಮಾನಂತವಾಡಿ ಸಮೀಪ ಪಂಜಾರಕೊಲ್ಲಿ ಎಂಬಲ್ಲಿ ನಿನ್ನೆ ಮುಂಜಾನೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಹುಲಿಯೇ ನಾಲ್ಕು ದಿನಗಳ ಹಿಂದೆ ಸ್ಥಳೀಯ ನಿವಾಸಿ ರಾಧಾ (46) ಎಂಬವರನ್ನು ಕೊಲೆಗೈದಿರುವುದಾಗಿ ಖಚಿತಪಡಿಸಲಾಗಿದೆ. ಹುಲಿಯನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ರಾಧಾರ ತಲೆಕೂದಲು, ಅವರು ಧರಿಸಿದ್ದ ಬಟ್ಟೆ ಬರೆಯ ತುಂಡುಗಳು ಹಾಗೂ ಬೆಂಡೋಲೆ ಹುಲಿಯ ಉದರದೊಳಗೆ ಪತ್ತೆಯಾಗಿದೆ. ಪಂಜಾರಕೊಲ್ಲಿಯ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ರಾಧಾ ಈ ತಿಂಗಳ ೨೪ರಂದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹುಲಿಯ ದಾಳಿಯಿಂದ ರಾಧಾ ಸಾವಿಗೀಡಾಗಿರುವುದಾಗಿ ಆವಾಗಲೇ ಖಚಿತಪಡಿಸಲಾಗಿತ್ತು. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧ ಆರಂಭಿಸಿದರು. ಕುತ್ತಿಗೆಗೆ ಉಂಟಾದ ಆಳದ ಗಾಯವೇ ಹುಲಿ ಸಾವಿಗೀಡಾಗಲು ಕಾರಣವೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಬೇರೆ ಹುಲಿಯೊಂದಿಗೆ ನಡೆದ ಕಾದಾಟ ವೇಳೆ ಗಂಭೀರ ಗಾಯಗೊಂಡು ಹುಲಿ ಸಾವಿಗೀಡಾಗಿ ರುವುದಾಗಿ ಅಂದಾಜಿಸಲಾಗಿದೆ.