ವಯನಾಡ್‌ನಲ್ಲಿ ವಿದ್ಯಾರ್ಥಿಯ ಸಾವು : ನಾಲ್ಕು ಆರೋಪಿಗಳಿಗಾಗಿ ಲುಕೌಟ್ ನೋಟೀಸ್

ಕಲ್ಪೆಟ್ಟ: ವಯನಾಡ್ ಪೂಕೋಡ್ ವೆಟರ್ನರಿ ಕಾಲೇಜಿನ ದ್ವಿತೀಯ ವರ್ಷ ಬಿವಿಎಸ್‌ಸಿ ವಿದ್ಯಾರ್ಥಿಯೂ ನೆಡುಮಂಗಾಡ್ ನಿವಾಸಿ ವಿನೋದ್ ನಗರ ನಿವಾಸಿಯಾದ ಸಿದ್ಧಾರ್ಥ್ (೨೧)ನ  ಸಾವಿಗೆ ಸಂಬಂಧಿಸಿ ಆರೋಪಿಗಳಾದ ನಾಲ್ಕು ಮಂದಿಗಾಗಿ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನು ೧೨ ಮಂದಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ೧೦ ವಿದ್ಯಾರ್ಥಿಗಳನ್ನು ಒಂದು ವರ್ಷಕ್ಕೆ  ನಿರ್ಬಂಧ ಹೇರಲಾಗಿದೆ. ಇವರಿಗೆ ತರಗತಿಯಲ್ಲಿ ಹಾಜರಾಗಲೋ, ಪರೀಕ್ಷೆ ಬರೆಯಲೋ ಸಾಧ್ಯವಿಲ್ಲ. ಇವರು ಸಿದ್ಧಾರ್ಥ್‌ಗೆ ಹಲ್ಲೆ ಗೈದವರಾಗಿದ್ದಾರೆಂದು ಹೇಳಲಾಗುತ್ತಿದೆ. ಇತರ ಇಬ್ಬರಿಗೆ ಒಂದು ವರ್ಷಕ್ಕೆ ಇಂಟರ್ನಲ್ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಹಲ್ಲೆಯಿಂದ ಸಿದ್ಧಾರ್ಥ ಗಾಯಗೊಂಡಿರುವುದನ್ನು ತಿಳಿದರೂ ಆಸ್ಪತ್ರೆಗೆ ದಾಖಲಿಸಲು ಮುಂದಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ೧೨ ಮಂದಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಪ್ರಕರಣದಲ್ಲಿ ೧೯ ಮಂದಿಗೆ ೩ ವರ್ಷಕ್ಕೆ ಶಿಕ್ಷಣ ನಿಷೇಧ ಹೇರಿದ ಬೆನ್ನಲ್ಲೇ ಇತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಾಲೇಜಿನ ಆಂಟಿ ರ‍್ಯಾಗಿಂಗ್ ಕಮಿಟಿ ಈ ಕ್ರಮ ಕೈಗೊಂಡಿದೆ.

ಫೆಬ್ರವರಿ ೧೮ರಂದು ಸಿದ್ಧಾರ್ಥ್ ಹಾಸ್ಟೆಲ್‌ನ ಶೌಚಾಲಯದಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸಿದ್ಧಾರ್ಥ್‌ನೊಂದಿಗೆ ಕಲಿತ ನಾಲ್ಕು ಮಂದಿ ಹಿರಿಯ ವಿದ್ಯಾರ್ಥಿಗಳು ಸೇರಿದ ತಂಡ ಸಿದ್ಧಾರ್ಥ್‌ಗೆ ಹಲ್ಲೆಗೈದು ಅಸ್ವಸ್ಥಗೊಳಿಸಿತ್ತೆನ್ನಲಾಗಿದೆ. ಅಸ್ವಸ್ಥಗೊಂಡ ಸಿದ್ಧಾರ್ಥ್‌ಗೆ ಮೂರು  ದಿನಗಳ ಕಾಲ ನೀರು ಕೂಡಾ ನೀಡದೆ ಹಾಸ್ಟೆಲ್‌ನ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆಂದು ಸಿದ್ಧಾರ್ಥ್ ತಂದೆ ಟಿ. ಜಯಪ್ರಕಾಶ್ ಆರೋಪಿಸಿದ್ದಾರೆ. ಕಾಲೇಜು ಹಾಸ್ಟೆಲ್‌ನಲ್ಲಿ ನಿಂತು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗೆ ತಂಡವೊಂದು ರ‍್ಯಾಗಿಂಗ್, ಗಂಭೀರ ಹಲ್ಲೆಗೈದು ಗಾಯಗೊಳಿಸಿದ್ದು, ಅದರ ಬೆನ್ನಲ್ಲೇ ಆತ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಡೀ ರಾಜ್ಯದಲ್ಲಿ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿಯ ಸಾವಿಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷ ನೇತಾರರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page