ವಿಕೃತ ವಿನೋದ ಮುಂದುವರಿಕೆ: ರೈಲಿಗೆ ಮತ್ತೆ ಕಲ್ಲು ತೂರಾಟ; ಓರ್ವ ಪ್ರಯಾಣಿಕನಿಗೆ ಗಾಯ
ಕಾಸರಗೋಡು: ಸಂಚರಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ ನಡೆಸಿ ಆ ಮೂಲಕ ವಿಕೃತ ವಿನೋದ ಪಡೆಯುವ ಕಿಡಿಗೇಡಿಗಳ ಕಾಟ ರಾಜ್ಯದಲ್ಲಿ ಇನ್ನೂ ಮುಂದುವರಿದಿದೆ.
ಪುಣೆ- ಎರ್ನಾಕುಳಂ ಸೂಪರ್ ಫಾಸ್ಟ್ ರೈಲಿಗೆ ನಿನ್ನೆ ಕಣ್ಣೂರಿನ ಎಡಕ್ಕಾಡ್ ಮತ್ತು ಧರ್ಮಡಂ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಕಣ್ಣೂರು ಕನ್ನಾಡಿಪರಂಬ ನಿವಾಸಿ ಮುಹಮ್ಮದ್ ಅನಸ್ಸ್ (೨೫)ರ ಬಲದ ಕೈಗೆ ಕಲ್ಲು ತಾಗಿ ಒಂದು ಬೆರಳು ಮುರಿದಿದೆ. ಘಟನೆ ಬಳಿಕ ಅನಸ್ಸ್ ಕಣ್ಣೂರು ರೈಲ್ವೇ ಪೊಲೀಸರಿಗೆ ದೂರು ನೀಡಿದಾಗಲೇ ಕಲ್ಲು ತೂರಾಟ ನಡೆದ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಮಾತ್ರವಲ್ಲ ಈ ಕಲ್ಲು ತೂರಾಟದಲ್ಲಿ ರೈಲಿನ ಬೋಗಿಯೊಂದರ ಕಿಟಕಿ ಗಾಜು ಕೂಡಾ ಪುಡಿಗೈಯ್ಯಲ್ಪಟ್ಟಿದೆ.
ತಕ್ಷಣ ರೈಲ್ವೇ ಪೊಲೀಸರು ಮತ್ತು ರೈಲ್ವೇ ಭದ್ರತಾ ಪಡೆ (ಆರ್ಪಿಎಫ್) ಕಲ್ಲು ತೂರಾಟ ನಡೆದ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆ ಪರಿಸರದ ಸಿಸಿಟಿವಿಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಅತೀ ಹೆಚ್ಚು ಎಂಬಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇದರ ಹೊರತಾಗಿ ಆಗಸ್ಟ್ ೧೪ರಂದು ತಿರುವನಂತಪುರ ಎಲ್ಟಿಟಿ ನೇತ್ರಾವತಿ ಎಕ್ಸ್ಪ್ರೆಸ್ ರೈಲು, ಮಂಗಳೂರು- ಚೆನ್ನೈ ಸೂಪರ್ ಎಕ್ಸ್ಪ್ರೆಸ್ ರೈಲುಗಳಿಗೂ ಕಲ್ಲು ತೂರಾಟ ನಡೆಸಲಾಗಿತ್ತು. ಹೀಗೆ ಆರು ರೈಲುಗಳಿಗೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಒಂದು ರೈಲಿಗೆ ಕಲ್ಲು ತೂರಾಟ ನಡೆಸಿದುದಕ್ಕೆ ಸಂಬಂಧಿಸಿ ಒಡಿಸ್ಸಾ ಕುರ್ದಾ ನಿವಾಸಿ ಸರ್ಬೆಶ್ವರ್ ಫರೀದ್ (೨೫)ನನ್ನು ರೈಲ್ವೇ ಪೊಲೀಸರು ಬಂಧಿಸಿದ್ದರು. ೨೦೨೨ರಲ್ಲಿ ರಾಜ್ಯದಲ್ಲಿ ವಿವಿಧೆಡೆಗಳಲ್ಲಾಗಿ ಒಟ್ಟು ೩೧ ರೈಲುಗಳಿಗೆ ಸಮಾಜಘಾತಕರು ಕಲ್ಲು ತೂರಾಟ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಇದನ್ನು ತಡೆಗಟ್ಟಲು ಆರ್ಪಿಎಫ್ಗಾಗಲೀ, ರೈಲ್ವೇ ಪೊಲೀಸರಿಗಾಗಲೀ ಇನ್ನೂ ಸಾಧ್ಯವಾಗದೇ ಇರುವುದು ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದೆ.