ವಿದೇಶಿ ಯುವತಿಯನ್ನು ಕೇರಳದ ವಿವಿಧೆಡೆ ಕರೆದೊಯ್ದು ಲೈಂಗಿಕ ಕಿರುಕುಳ: ಆರೋಪಿಗಾಗಿ ಶೋಧ

ಇಡುಕ್ಕಿ: ಸೋಶ್ಯಲ್ ಮೀಡಿಯಾದಲ್ಲಿ ಪರಿಚಯಗೊಂಡ ವಿದೇಶಿ ಯುವತಿಯನ್ನು ಕೇರಳಕ್ಕೆ ಬರಮಾಡಿ ಉಪಾಯದಿಂದ ವಿವಿಧೆಡೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ, ಆಕೆಯ ಕೈಯಲ್ಲಿದ್ದ ಹಣವನ್ನು ಲಪಟಾಯಿಸಿ ವ್ಯಕ್ತಿ ಯೋರ್ವ ತಲೆಮರೆಸಿಕೊಂಡಿದ್ದಾನೆ.

ತಮಿಳುನಾಡಿನ ಕೊಯಂ ಬತ್ತೂರು ನಿವಾಸಿ ಪ್ರೇಂಕುಮಾರ್ (೫೦) ಎಂಬಾತ ಈ ಪ್ರಕರಣದ ಆರೋಪಿಯೆಂದು ದೂರಲಾಗಿದೆ. ಈತನಿಗಾಗಿ ಕೇರಳ ಹಾಗೂ ತಮಿಳುನಾಡಿನ ವಿವಿಧೆಡೆ ಹುಡುಕಾಟ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಚೆಕೋಸ್ಲಾಮಿಯ ಪ್ರಜೆಯಾದ ೩೯ರ ಹರೆಯದ ಯುವತಿಯನ್ನು ಆರೋಪಿ ಪ್ರೇಂಕುಮಾರ್ ಫೇಸ್ ಬುಕ್‌ನಲ್ಲಿ ಪರಿಚಯಗೊಂಡಿದ್ದನು. ಬಳಿಕ ಆಕೆಯೊಂದಿಗೆ  ಸ್ನೇಹ ನಟಿಸಿ ಕೇರಳಕ್ಕೆ ಬರುವಂತೆಯೂ ಇಲ್ಲಿನ ಪ್ರವಾಸಿ ಸ್ಥಳಗಳನ್ನು ತೋರಿಸಿ ಕೊಡುವುದಾಗಿ ತಿಳಿಸಿದ್ದನೆನ್ನಲಾಗಿದೆ.  ಇದರಂತೆ ಕಳೆದ ತಿಂಗಳ ೧೨ರಂದು ಯುವತಿ ಕೊಚ್ಚಿಗೆ ತಲುಪಿದ್ದಳು. ಅಲ್ಲಿಂದ ಪ್ರೇಂಕುಮರ್ ಯುವತಿಯನ್ನು ತನ್ನ ಕಾರಿನಲ್ಲಿ ವಾಸ್ತವ್ಯಕ್ಕೆಂದು ಚೆರಾಯಿಯಲ್ಲಿರುವ ರೆಸಾರ್ಟ್‌ಗೆ ಕರೆದೊಯ್ದಿದ್ದನು. ಬಳಿಕ ಅಲ್ಲಿ ಆಕೆ ಮೇಲೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಆದರೆ ಭಾರತದಲ್ಲಿ ಪರಿಚಯಸ್ಥರು ಯಾರೂ ಇಲ್ಲದುದರಿಂದ ತನಗಾದ ಅನ್ಯಾಯವನ್ನು ತಿಳಿಸಲು ಅಥವಾ ಪೊಲೀಸರಿಗೆ ದೂರು ನೀಡಲು ಯುವತಿಗೆ ಸಾಧ್ಯವಾಗಲಿಲ್ಲ.  ಇದ ರಿಂದ ಪ್ರೇಂಕುಮಾರ್ ತಿಳಿಸಿದಂತೆಯೇ ನಡೆದುಕೊಳ್ಳಬೇಕಾಯಿತು. ಅನಂತರ ಆರೋಪಿ ಆಕೆಯನ್ನು ಆಲಪ್ಪುಳ ಸಹಿತ ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಿದ್ದನು. ಈ  ವೇಳೆ ಯುವತಿ ಆತನನ್ನು ಪ್ರಶ್ನಿಸಿದ್ದು, ಇದರಿಂದ ಆತನಲ್ಲಿ ದ್ವೇಷ ಹುಟ್ಟಿಕೊಂಡಿತು. ಈ ಮೊದಲೇ ಯುವತಿ ಖರ್ಚಿಗಾಗಿ ನೀಡಿದ ೩೦,೦೦೦ ರೂಪಾಯಿ ಹಾಗೂ ೨೦೦ ಪೌಂಡ್‌ಗಳನ್ನು  ಮರಳಿ ನೀಡದೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಅನಂತರ ಯುವತಿ ಪೊಲೀಸರಿಗೆ ದೂರು ನೀಡಬೇಕಾಯಿತು. ಇದರಂತೆ ಕೇಸು ದಾಖಲಿಸಿಕೊಂಡ ಕುಮಳಿ ಪೊಲೀಸರು ಆರೋಪಿ ಪ್ರೇಂಕುಮಾರ್‌ಗಾಗಿ ಶೋಧ ನಡಸುತ್ತಿದಾರೆ.

Leave a Reply

Your email address will not be published. Required fields are marked *

You cannot copy content of this page