ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಗುರಿ: ಕಾರಿನಲ್ಲಿ ಸಾಗಿಸುತ್ತಿದ್ದ 90 ಗ್ರಾಂ ಎಂಡಿಎಂಎ ಸಹಿತ ಯುವತಿ ಸೆರೆ
ಕೊಲ್ಲಂ: ರಾಜ್ಯದಲ್ಲಿ ಮಾದಕ ವಸ್ತು ಸಾಗಾಟ, ಮಾರಾಟ ದಂಧೆ ಮತ್ತಷ್ಟು ತೀವ್ರಗೊಂಡಿದ್ದು, ಇದರ ವಿರುದ್ಧ ಪೊಲೀಸ್, ಅಬಕಾರಿ ಕಾರ್ಯಾಚರಣೆ ವ್ಯಾಪಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಕಳೆದ ಕೆಲವು ದಿನಗಳಿಂದ ಮಾದಕವಸ್ತುಗಳ ಸಹಿತ ಹಲವು ಮಂದಿ ಸೆರೆಗೀಡಾಗಿದ್ದ್ದಾರೆ. ಇದರಿಂದ ವಿವಿಧ ರೀತಿಯ ಮಾರಕ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಸಹಿತ ಯುವ ಜನತೆ ಯನ್ನು ಗುರಿಯಿರಿಸಿ ರಾಜ್ಯದಲ್ಲಿ ಮಾದಕ ವಸ್ತು ಮಾಫಿಯಾಗಳು ಕಾರ್ಯಾಚರಿಸುತ್ತಿರುವುದಾಗಿ ಈಗಾಗಲೇ ತನಿಖೆಯಲ್ಲಿ ತಿಳಿದು ಬಂದಿದೆ.
ಕೊಲ್ಲಂ ನಗರದಲ್ಲಿ ನಿನ್ನೆ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ 90 ಗ್ರಾಂ ಎಂಡಿಎಂಎ ಸಹಿತ ಓವೆ ಯುವತಿಯನ್ನು ಸೆರೆಹಿಡಿಯಲಾಗಿದೆ. ಅಂಜಾಲುಂ ಮಾಡ ನಿವಾಸಿ ಅನಿಲ ರವೀಂದ್ರನ್ (34) ಎಂಬಾಕೆ ಸೆರೆಗೀಡಾದ ಆರೋಪಿಯಾಗಿದ್ದಾಳೆ. ಸಿಟಿ ಡಾನ್ಸಫ್ ಟೀಂ ಹಾಗೂ ಶಕ್ತಿ ಕುಳಂಗರ ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಅನಿಲ ರವೀಂದ್ರನ್‌ಳನ್ನು ಸೆರೆಹಿಡಿಯಲಾಗಿದೆ. ಈಕೆ ಸಂಚರಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಕರ್ನಾಟಕದಿಂದ ಇದನ್ನು ಈಕೆ ತಂದಿದ್ದಾಳೆಂದೂ ತಿಳಿದುಬಂದಿದೆ. ಈಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿ ಸಿದಾಗ ಮತ್ತೆ ೪೦ ಗ್ರಾಂ ಎಂಡಿಎಂಎ ಪತ್ತೆಯಾಗಿರುವುದಾಗಿಯೂ ಹೇಳಲಾಗುತ್ತಿದೆ. ಈಕೆ ಈ ಹಿಂದೆಯೂ ಎಂಡಿಎಂಎ ಪ್ರಕರಣದಲ್ಲಿ ಆರೋಪಿಯಾಗಿದ್ದಳು.
ಕೊಲ್ಲಂ ನಗರದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟಗೈಯ್ಯಲು ಈಕೆ ಕರ್ನಾಟಕದಿಂದ ಸ್ವಂತ ಕಾರಿನಲ್ಲಿ ಎಂಡಿಎಂಎ ತರುತ್ತಿರುವುದಾಗಿ ಕೊಲ್ಲಂ ಸಿಟಿ ಪೊಲೀಸ್ ಕಮಿಷ ನರ್ ಕಿರಣ್ ನಾರಾಯಣರಿಗೆ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ನಿನ್ನೆ ಬೆಳಿಗ್ಗಿನಿಂದ ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದರು. ಸಂಜೆ ೫ ಗಂಟೆ ವೇಳೆ ನೀಂಡಕರ ಸೇತುವೆ ಬಳಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.