ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮದ್ಯ, ತಂಬಾಕು ಉತ್ಪನ್ನ ವಶ

ಕಾಸರಗೋಡು: ಅಬಕಾರಿ ಇಲಾಖೆ ತಂಡ ಜಿಲ್ಲೆಯಲ್ಲಿ ನಡೆಸುತ್ತಿರುವ ದಾಳಿ ಇನ್ನೂ ಮುಂದುವರಿಯುತ್ತಿದ್ದು, ಅದರಂತೆ ನಿನ್ನೆ ವಿವಿಧೆಡೆಗಳಲ್ಲಾಗಿ ನಡೆಸಲಾದ ದಾಳಿಯಲ್ಲಿ ಮದ್ಯ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ.

ಇದರಂತೆ ಆದೂರು ತಪಾಸಣಾ ಕೇಂದ್ರದಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ಬಿ.ಎಂ. ಅಬ್ದುಲ್ಲ ಕುಂಞಿಯವರ ನೇತೃತ್ವದ ವಾಹನ ತಪಾಸಣೆಯಲ್ಲಿ ಕರ್ನಾಟಕ ನಿರ್ಮಿತ ೨.೨೫೦ ಲೀಟರ್ (೩೭೫ ಎಂ.ಎಲ್‌ನ ೬ ಬಾಟಲಿ) ಮದ್ಯವನ್ನು ಸುಳ್ಯದಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನೊಳಗಿನಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಈ ಮಾಲನ್ನು ಯಾರು ಸಾಗಿಸುತ್ತಿದ್ದರು ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಅವರ ನೇತೃತ್ವದ ಅಬಕಾರಿ ತಂಡ ಕೂಡ್ಲು ಪಾರೆಕಟ್ಟೆಯಲ್ಲಿ ಅಂಗಡಿಯೊಂದಕ್ಕೆ ನಡೆಸಿದ ದಾಳಿಯಲ್ಲಿ  ಅಲ್ಲಿ ಅನಧಿಕೃತವಾಗಿ ಇರಿಸಲಾಗಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ೧ ಕಿಲೋ ತಂಬಾಕು ಉತ್ಪನ್ನಗಳನ್ನು  ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ರಾಮಚಂದ್ರ ಎಂಬವರಿಗೆ ೨೦೦೦ ರೂ. ಜುಲ್ಮಾನೆ ವಿಧಿಸಲಾಗಿದೆ.

ಬಾಯಾರು ಧರ್ಮತ್ತಡ್ಕದಲ್ಲಿ ಹಿತ್ತಿಲೊಂದರಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಬಚ್ಚಿಡಲಾಗಿದ್ದ ೮.೬೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಕುಂ ಬಳೆ ಅಬಕಾರಿ  ರೇಂಜ್‌ನ ಪ್ರಿವೆಂಟಿವ್ ಆಫೀಸರ್ ಸುರೇಶ್ ಬಾಬುರ ನೇತೃತ್ವದ ತಂಡ ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಮಾಲನ್ನು ಅಲ್ಲಿ ಬಚ್ಚಿಟ್ಟವರ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ದಾಳಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಮನಾಸ್ ಕೆ.ವಿ,  ರಮೇಶನ್ ಮತ್ತು ಚಾಲಕ ಪ್ರವೀಣ್ ಎಂಬವರು ಒಳಗೊಂಡಿದ್ದಾರೆ.

ವೆಳ್ಳರಿಕುಂಡ್‌ನ ಕೋಡೋಂನಲ್ಲಿ ಹೊಸದುರ್ಗ ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಎಂ. ರಾಜೀವನ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮದ್ಯ ಕೈವಶವಿರಿಸಿಕೊಂಡಿದ್ದ ರಾಮಕೃಷ್ಣನ್ (೪೭) ಎಂಬಾತನನ್ನು ಸೆರೆ ಹಿಡಿದು ೩.೫ ಲೀಟರ್ ಮದ್ಯ ವಶಪಡಿಸಿದೆ.

ಇನ್ನೊಂದೆಡೆ ಹೊಸದುರ್ಗ ಅಬಕಾರಿ ರೇಂಜ್‌ನ ಅಬಕಾರಿ ತಂಡ ಹೊಸದುರ್ಗ ರೇಂಜ್‌ಗೊಳಪಟ್ಟ ಪ್ರದೇಶದ ಅರಣ್ಯ ಪ್ರದೇಶವನ್ನಿಡೀ ಮೊನ್ನೆ ಜಾಲಾಡಿದೆ. ಆದರೆ ಅಲ್ಲಿ ಯಾವುದೇ ಮಾಲುಗಳು ಪತ್ತೆಯಾಗಿಲ್ಲ.

ಕ್ರಿಸ್ಮಸ್ ಹಾಗೂ ಹೊಸವರ್ಷದ ಅಂಗವಾಗಿ ಕಾಸರಗೋಡು ಎಕ್ಸೈಸ್ ರೇಂಜ್‌ನ ಅಧಿಕಾರಿಗಳು ಮತ್ತು ತಳಂಗರೆ ಕರಾವಳಿ ಪೊಲೀಸ್ ಠಾಣೆಯ ಪೊಲೀಸರು ನಿನ್ನೆ ಕಾಸರಗೋಡು ಕಡಪ್ಪುರದ ವಿವಿಧ ಭಾಗಗಳಲ್ಲಾಗಿ ಮಾದಕ ದ್ರವ್ಯ ಮತ್ತು ಮದ್ಯ ಇತ್ಯಾದಿಗಳ ಪತ್ತೆಗಾಗಿ ದಾಳಿ ನಡೆಸಿದ್ದು, ಇದರಲ್ಲಿ ಏನೂ ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page