ವಿವಿಧೆಡೆಗಳಿಗೆ ಅಬಕಾರಿ ದಾಳಿ : ಮದ್ಯ, ವಾಶ್, ಗಾಂಜಾ ವಶ
ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ಹಲವೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ, ವಾಶ್ ಮತ್ತು ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಹೊಸದುರ್ಗ ರೈಲು ನಿಲ್ದಾಣ ರಸ್ತೆ ಬಳಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 18 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿದ ಪಯ್ಯನ್ನೂರು ಕೋರೋಂ ನಿವಾಸಿ ಅಭಿಮನ್ಯು ಕೆ.ವಿ. (24) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಬಂದಡ್ಕ ನರಂಬಿಲಕಂಡದಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಯವರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 40 ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇನ್ನೊಂದೆಡೆ ಕುಂಬಳೆ ಅನಂತಪುರ ರಸ್ತೆಯ ಬಳಿ ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಅನೀಶ್ ಕುಮಾರ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ 3.600 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ಕೇಸು ದಾಖಲಿಸಲಾಗಿದೆ.
ಕುಂಬಳೆ ಸಮೀಪದ ಪುನಂಗಳದಲ್ಲಿ ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ಮಧ್ಯಾಹ್ನ ಬಸ್ಸೊಂದರಲ್ಲಿ ನಡೆಸಿದ ತಪಾಸಣೆಯಲ್ಲಿ ಅದರೊಳಗೆ ಉಪೇಕ್ಷಿತ ಸ್ಥಿತಿಯಲ್ಲಿ ಬಚ್ಚಿಟ್ಟಿದ್ದ 17.64 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಇದಕ್ಕೆ ಸಂಬಂಧಿಸಿ ಈ ತನಕ ಯಾರ ವಿರುದ್ಧವೂ ಕೇಸು ದಾಖಲಿಸಿಲ್ಲ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಶಾಂತ್ ಕುಮಾರ್, ಅಜೀಶ್, ಸಿವಿಲ್ ಎಕ್ಸೈಸ್ ಆಫೀಸರ್ ಅತುಲ್ ಮತ್ತು ಚಾಲಕ ಸಜೀಶ್ ಎಂಬವರು ಒಳಗೊಂಡಿದ್ದರು.