ವಿಷ ಸೇವಿಸಿ ಸಾವಿಗೀಡಾದ ಬೇಡಗಂ ಠಾಣೆ ಎಸ್.ಐಗೆ ನಾಡಿನ ಕಂಬನಿ
ಕಾಸರಗೋಡು: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟ ಬೇಡಗಂ ಠಾಣೆ ಎಸ್.ಐ. ಮಾನಡ್ಕ ಪಾಡಿ ನಿವಾಸಿ ಕೆ. ವಿಜಯನ್ (49) ಅವರಿಗೆ ನಾಡಿನ ಹಲವಾರು ಮಂದಿ ಅಂತಿಮ ನಮನ ಸಲ್ಲಿಸಿದರು. ನಿನ್ನೆ ರಾತ್ರಿ ಕಾಞಂಗಾಡ್‌ಗೆ ತಲುಪಿದ ವಿಜಯನ್‌ರ ಮತದೇಹ ವನ್ನು ಇಂದು ಬೆಳಿಗ್ಗೆ ಬೇಡಗಂ ಠಾಣೆಗೆ ತಲುಪಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿನೋಯ್, ಡಿವೈಎಸ್ಪಿ ಜಯನ್ ಸಹಿತ ವಿವಿಧ ಪೊಲೀಸ್ ಅಧಿಕಾರಿಗಳು, ಶಾಸಕ ಸಿ.ಎಚ್. ಕುಂಞಂಬು, ಕಾಂಗ್ರೆಸ್ ಮಂಡಲ ಅಧ್ಯಕ್ಷ ಕುಂಞಿಕಣ್ಣನ್, ಬಿಜೆಪಿ ಮಂಡಲ ಅಧ್ಯಕ್ಷ ಉದಯನ್ ಸಹಿತ ಹಲವರು ತಲುಪಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹ ವನ್ನು ಸ್ವ-ಗೃಹಕ್ಕೆ ಕೊಂಡೊಯ್ಯಲಾ ಯಿತು. ಎಪ್ರಿಲ್ ೨೯ರಂದು ಬೆಳಿಗ್ಗೆ ಬೇಡಗಂ ಠಾಣೆಯ ಕ್ವಾರ್ಟರ್ಸ್‌ನಲ್ಲಿ ಇಲಿವಿಷ ಸೇವಿಸಿದ ಸ್ಥಿತಿಯಲ್ಲಿ ಎಸ್.ಐ. ಕೆ. ವಿಜಯನ್ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬಳಿಕ ಎರ್ನಾಕುಳಂನ ಅಮೃತ ಆಸ್ಪತ್ರೆಗೆ ತಲುಪಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ ಸಂಜೆ ಮೃತಪಟ್ಟಿದ್ದಾರೆ. ಕೆಲಸದ ಒತ್ತಡ ಸಹಿಸಲಾಗದುದರಿಂದ ವಿಷ ಸೇವಿಸಿರುವುದಾಗಿ ಎಸ್‌ಐ ವಿಜಯನ್ ಪೊಲೀಸರಲ್ಲಿ ತಿಳಿಸಿದ್ದಾರೆನ್ನಲಾಗಿದೆ.
ಕುಟ್ಟಿ ನಾಯ್ಕ್- ಅಕ್ಕಾಚುಬಾಯಿ ದಂಪತಿಯ ಪುತ್ರನಾದ ಮೃತರು ಪತ್ನಿ ಶ್ರೀಜ, ಮಕ್ಕಳಾದ ಆವಣಿ, ಅಭಿಜಿತ್, ಸಹೋದರ- ಸಹೋದರಿಯರಾದ ಬಾಲಾಮಣಿ, ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಜನಾರ್ದನನ್ ಈ ಹಿಂದೆ ನಿಧನ ಹೊಂದಿದ್ದಾರೆ.