ವೆಸ್ಟ್‌ನೈಲ್ ಜ್ವರ: ಜಿಲ್ಲೆಗಳಲ್ಲೂ ಜಾಗ್ರತೆ ಪಾಲಿಸಬೇಕು- ಸಚಿವೆ

ತಿರುವನಂತಪುರ: ಮಲಪ್ಪುರಂ, ಕಲ್ಲಿಕೋಟೆ, ತೃಶೂರು ಜಿಲ್ಲೆಗಳಲ್ಲಿ ವೆಸ್ಟ್‌ನೈಲ್ ಜ್ವರ ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲೂ ಜಾಗರೂಕತೆ ವಹಿಸಬೇಕೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ವೆಸ್ಟ್‌ಮೈಲ್ ಜ್ವರವನ್ನು ಹಿಮ್ಮೆಟ್ಟಿಸಲು ಸೊಳ್ಳೆಗಳ  ನಿವಾರಣೆ, ಮೂಲ ಪತ್ತೆಹಚ್ಚಿ ನಾಶಪಡಿಸುವುದು ಪ್ರಧಾನವಾಗಿದೆ ಎಂದು ಇಲಾಖೆ ತಿಳಿಸಿದೆ. ಕಳೆದ ವಾರ ನಡೆದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಮಳೆಗಾಲಪೂರ್ವ ಶುಚೀಕರಣ ಚಟುವಟಿಕೆಗಳನ್ನು ತೀವ್ರಗೊಳಿಸಲು ನಿರ್ದೇಶಿಸಲಾಗಿದೆ. ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಜಿಲ್ಲಾ ವೈದ್ಯಾಧಿಕಾರಿಗೆ ನಿರ್ದೇಶಿಸಿರುವುದಾಗಿ ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ತ್ರಿಸ್ತರ ಸಂಸ್ಥೆಗಳು ಚಟುವಟಿಕೆಗಳನ್ನು ನಡೆಸಲು ನಿರ್ದೇಶಿಸಲಾಗಿದೆ. ಜಿಲ್ಲಾ ರೆಕ್ಟರ್ ಕಂಟ್ರೋಲ್ ಘಟಕದಲ್ಲಿ ವಿವಿಧ ಭಾಗಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. 2011ರಿಂದ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ವೆಸ್ಟ್‌ನೈಲ್ ವರದಿಯಾಗುತ್ತಿದೆ. ಆದರೆ ಈ ಬಗ್ಗೆ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಜ್ವರ ಅಥವಾ ಇತರ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕೆಂದು ಸಚಿವೆ ವಿನಂತಿಸಿದ್ದಾರೆ.

ಕ್ಯೂಲೆಕ್ಸ್ ಸೊಳ್ಳೆಗಳು  ಹರಡುವ ಒಂದು ರೀತಿಯ ಜ್ವರವಾಗಿದೆ ವೆಸ್ಟ್‌ನೈಲ್. ಜಪಾನ್ ಜ್ವರದಂತೆ ಇದು ಅಪಾಯಕಾರಿಯಲ್ಲ. ಜಪಾನ್ ಜ್ವರ ಸಾಮಾನ್ಯವಾಗಿ 18 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿಗೆ ತಗಲುವುದಾಗಿದ್ದರೆ, ವೆಸ್ಟ್‌ನೈಲ್ ಹಿರಿಯರಲ್ಲೂ ಕಂಡುಬರುತ್ತದೆ. ತಲೆನೋವು, ಜ್ವರ, ಸಂಧಿ ನೋವು, ತಲೆ ಸುತ್ತುವುದು, ನೆನಪು ಶಕ್ತಿ ಕಡಿಮೆಯಾಗುವುದು ಎಂಬಿವು ಈ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ರೋಗ ತಗಲಿದ ಹೆಚ್ಚಿನ ಜನರಲ್ಲಿ ಕೆಲವೊಮ್ಮೆ ರೋಗ ಲಕ್ಷಣಗಳು ಪ್ರಕಟಗೊಳ್ಳುವುದಿಲ್ಲ. ಕೆಲವರಿಗೆ ಜ್ವರ, ತಲೆನೋವು, ವಾಂತಿ, ತುರಿಕೆ ಮೊದಲಾದ ಲಕ್ಷಣಗಳು ಕಾಣಬಹುದಾಗಿದೆ. ಕೇವಲ 1 ಶೇಕಡಾ ಜನರಲ್ಲಿ ಮೆದುಳಿಗೆ ಸಮಸ್ಯೆ ಸೃಷ್ಟಿಸಿ ಪ್ರಜ್ಞೆ ತಪ್ಪುವ ಸನ್ನಿವೇಶವಿದ್ದು, ಇದು ಸಾವಿಗೂ ಕಾರಣವಾಗಬಹುದು.

ವೆಸ್ಟ್‌ನೈಲ್ ವೈರಸ್ ವಿರುದ್ಧ ಔಷಧಿ ಅಥವಾ ವ್ಯಾಕ್ಸಿನ್ ಲಭ್ಯವಿಲ್ಲದ ಕಾರಣ ರೋಗಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ಹಾಗೂ ಪ್ರತಿರೋಧ ಒಡ್ಡುವುದು ಪ್ರದಾನವಾಗಿದೆ. ಸೊಳ್ಳೆಯಿಂದ ಕಚ್ಚಿಸಲ್ಪಡದೆ ಇರು ವುದು ಅತ್ಯಂತ ಉತ್ತಮ ಮಾರ್ಗವಾಗಿದೆ. ದೇಹವನ್ನು ಸಂಪೂರ್ಣ ಮುಚ್ಚುವ ರೀತಿಯಲ್ಲಿ ಬಟ್ಟೆ ಧರಿಸಬೇಕು. ಸೊಳ್ಳೆಪರದೆ ಉಪಯೋಗಿಸಬೇಕು. ಸ್ವಯಂ ಚಿಕಿತ್ಸೆ ನಡೆಸಿ ರೋಗವನ್ನು ಸಂಕೀರ್ಣಗೊಳಿಸಬಾರದು ಎಂದು ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

You cannot copy content of this page