ವ್ಯಾಪಾರ ಸಂರಕ್ಷಣಾ ಯಾತ್ರೆಗೆ ಚಾಲನೆ
ಕಾಸರಗೋಡು: ಕಿರುವ್ಯಾಪಾರ ವಲಯಗಳಲ್ಲಿ ಅನಗತ್ಯ ನಿಯಂತ್ರಣ ಹೇರಿಕೆ ಮತ್ತು ಕಾನೂನುಗಳನ್ನು ಬಡಿದೇರಿಸುವಿಕೆ ನೀತಿಯನ್ನು ಪ್ರತಿಭಟಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜ್ಯ ಅಧ್ಯಕ್ಷ ರಾಜು ಅಪ್ಸರಾರ ನೇತೃತ್ವದ ವ್ಯಾಪಾರ ಸಂರಕ್ಷಣಾ ಯಾತ್ರೆಗೆ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ನಗರದ ಚಂದ್ರಗಿರಿ ಚಾಲ ಜಂಕ್ಷನ್ ಬಳಿ ಇಂದು ಬೆಳಿಗ್ಗೆ ಆರಂಭಗೊಂಡ ಯಾತ್ರೆಯನ್ನು ಸಂಘಟನೆಯ ತಿರುವನಂತಪುರ ಜಿಲ್ಲಾ ಘಟಕದ ಅಧ್ಯಕ್ಷ ಪೆರಿಂಙಮಲ ರಾಮಚಂದ್ರನ್ ಉದ್ಘಾಟಿಸಿದರು. ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಿದ ಬಳಿಕ ಫೆಬ್ರವರಿ ೧೩ರಂದು ಯಾತ್ರೆ ತಿರುವನಂತಪುರದಲ್ಲಿ ಪುತ್ತರಿಕಂಡ ಮೈದಾನದಲ್ಲಿ ಮಹಾರ್ಯಾಲಿಯೊಂದಿಗೆ ಯಾತ್ರೆ ಸಮಾಪ್ತಿಹೊಂದಲಿದೆ. ಅಂದು ೨೯ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಅದರ ಪ್ರತಿಗಳನ್ನು ಶಾಸಕರಾದ ಎನ್.ಎ. ನೆಲ್ಲಿಕುನ್ನು ಮತ್ತು ಎಂ. ರಾಜಗೋಪಾಲನ್ರಿಗೆ ಸಂಘಟನೆಯ ರಾಜ್ಯ ಅಧ್ಯಕ್ಷ ರಾಜು ಅಪ್ಸರಾ ಅವರು ಈಗಾಗಲೇ ಹಸ್ತಾಂತರಿಸಿದ್ದಾರೆ. ಇಂದು ಆರಂಭಗೊಂಡ ಯಾತ್ರೆಯಲ್ಲಿ ೫೦೦೦ದಷ್ಟು ವ್ಯಾಪಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಕೋಶಾಧಿಕಾರಿ ಎಸ್. ದೇವರಾಜನ್, ಕೆ. ಅಹಮ್ಮದ್ ಶರೀಫ್, ಪಿ.ಸಿ. ಜೇಕಬ್, ಮಾಹಿನ್ ಕೋಳಿಕ್ಕರ, ಎ.ಎ. ಅಸೀಸ್, ಕೆ. ದಿನೇಶನ್, ಟಿ.ಕೆ. ಅನ್ವರ್ ಸದಾತ್ತ್, ಯು.ಎ. ಅಬ್ದುಲ್ ಸಲೀಂ ಸೇರಿದಂತೆ ಹಲವರು ಭಾಗವಹಿಸಿದರು.
ಯಾತ್ರೆಯ ಸಮಾರೋಪ ದಿನವಾದ ಫೆ. ೧೩ರಂದು ವ್ಯಾಪಾರಿಗಳು ತಮ್ಮ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ಮಹಾರ್ಯಾಲಿಯಲ್ಲಿ ಭಾಗವಹಿಸುವರು.